ಮನಪಾದಿಂದ 270.67 ಕೋಟಿ ರೂ. ಮಿಗತೆ ಬಜೆಟ್ ಮಂಡನೆ

Update: 2019-01-30 17:04 GMT

ಮಂಗಳೂರು, ಜ.30: ಮಹಾನಗರ ಪಾಲಿಕೆಯು ಆರಂಭಿಕ ಶುಲ್ಕ ಸೇರಿ 2019-20ನೇ ಸಾಲಿನಲ್ಲಿ 27067.32 ಲಕ್ಷ ರು. ಮಿಗತೆ ಬಜೆಟ್ ಮಂಡಿಸಿದೆ. ಆದರೆ ಆದರೆ ಈ ಸಾಲಿನಲ್ಲಿ ಆದಾಯಕ್ಕಿಂತ ನಿರೀಕ್ಷಿತ ವೆಚ್ಚ ಅಧಿಕವಾಗಿದೆ.

ಮೇಯರ್ ಭಾಸ್ಕರ ಕೆ. ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ವಿಶೇಷ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಅವರು 2019-20ನೆ ಸಾಲಿನ ಬಜೆಟ್ ಮಂಡಿಸಿದರು.

ಪಾಲಿಕೆಯಲ್ಲಿನ ಹಿಂದಿನ ಉಳಿಕೆ ಮೊತ್ತ 30504.52 ಲಕ್ಷ ರೂ.ಗಳಾಗಿದ್ದು, 2019-20ನೇ ಸಾಲಿಗೆ ಎಲ್ಲ ಮೂಲಗಳಿಂದ 64,290.25 ಲಕ್ಷ ರೂ. ಒಟ್ಟು ಆದಾಯವನ್ನು ನಿರೀಕ್ಷಿಸಲಾಗಿದೆ. ಇದೇ ವೇಳೆ ಈ ಅವಧಿಯಲ್ಲಿ 67,727.45 ಲಕ್ಷ ರೂ. ವೆಚ್ಚವನ್ನು ನಿರೀಕ್ಷಿಸಲಾಗಿದೆ.

ಹೊಸ ಘೋಷಣೆಗಳು: ಪಾಲಿಕೆ ವ್ಯಾಪ್ತಿಯ ಆರ್ಥಿಕ ಹಿಂದುಳಿದ ಕುಟುಂಬಗಳಿಗೆ ಪ್ರಾಕೃತಿಕ ವಿಕೋಪದಲ್ಲಿ ಹಾನಿಗೀಡಾದವರಿಗೆ ವೈದ್ಯಕೀಯ ವೆಚ್ಚ ಇದುವರೆಗೆ ನೀಡುತ್ತಿರಲಿಲ್ಲ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಶೇ.7.25 ಯೋಜನೆಯಡಿ 5 ಲಕ್ಷ ರೂ. ಇದಕ್ಕಾಗಿ ಕಾಯ್ದಿರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಪಾಲಿಕೆ ವತಿಯಿಂದ ಮನೆ ದುರಸ್ತಿಗೆ ಸ್ವಸ್ಥ ಕುಟೀರ ಯೋಜನೆಯಡಿ ಈ ಬಾರಿ ಹಳೆ ಮುನ್ಸಿಪಾಲಿ ವ್ಯಾಪ್ತಿಯ ವಾರ್ಡ್‌ಗಳನ್ನು ಹೊರತುಪಡಿಸಿ ಇತರ ವಾರ್ಡ್‌ಗಳಲ್ಲಿ ತಲಾ 5 ಮಂದಿ ಫಲಾನುಭವಿಗಳಿಗೆ ಯೋಜನೆ ವಿಸ್ತರಿಸಲು ಉದ್ದೇಶಿಸಲಾಗಿದೆ.

ಪಾಲಿಕೆಯ ಎಲ್ಲ ಪ್ರಮುಖ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಲು 100 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ಅಲ್ಲದೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 100 ಚ.ಮೀಟರ್ ವಿಸ್ತೀರ್ಣದ ಹೆಚ್ಚಿನ ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ಧತಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಎಲ್ಲ ಪಾರ್ಕ್ ಮತ್ತು ಸಾರ್ವಜನಿಕ ಪ್ರದೇಶಗಳ ಅಭಿವೃದ್ಧಿ ಮತ್ತು ಹಸಿರೀಕರಣಕ್ಕೆ 300 ಲಕ್ಷ ರೂ. ಮೀಸಲಿರಿಸಲಾಗಿದೆ.

ಕುಂಜತ್ತಬೈಲಲ್ಲಿ ಕಟ್ಟಡ ತ್ಯಾಜ್ಯ ವಿಲೇ

ಕಟ್ಟಡ ನಿರ್ಮಾಣ ಸಂದರ್ಭ ಉಳಿಕೆಯಾಗುವ ತ್ಯಾಜ್ಯ ವಿಲೇವಾರಿಗೆ ನಗರದ ಕುಂಜತ್ತಬೈಲ್ ಪ್ರದೇಶವನ್ನು ಗುರುತಿಸಲಾಗಿದೆ. ಕಟ್ಟಡಕ್ಕೆ ಪರವಾನಗಿ ನೀಡುವಾಗಲೇ ಕಟ್ಟಡ ತ್ಯಾಜ್ಯ ಶುಲ್ಕ ಪರಿಷ್ಕರಿಸಿ ವಸೂಲಿ ಮಾಡಲು ಉದ್ದೇಶಿಸಲಾಗಿದೆ.

ಮನೆಗಳಲ್ಲೇ ಹಸಿ ತ್ಯಾಜ್ಯ ಸಂಸ್ಕರಣೆ

ಮನೆಗಳ ಹಂತದಲ್ಲೇ ಹಸಿ ತ್ಯಾಜ್ಯ ಸಂಸ್ಕರಿಸುವ ಯೋಜನೆಯಡಿ ಮೊದಲ ಹಂತದಲ್ಲಿ 5 ಸಾವಿರ ಮನೆಗಳಲ್ಲಿ ಹಸಿತ್ಯಾಜ್ಯ ಸಂಸ್ಕರಣೆಗೆ ಕಾರ್ಯಕ್ರಮ ಹಮ್ಮಿಕೊಳ್ಳುವುದರೊಂದಿಗೆ ಉತ್ಪಾದನೆ ಹಂತದಲ್ಲೇ ತ್ಯಾಜ್ಯ ಪ್ರಮಾಣ ಕಡಿತಗೊಳಿಸಲು ನಾಗರಿಕರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಲೇಡಿಹಿಲ್‌ನಿಂದ ಕೊಟ್ಟಾರ ಚೌಕಿವರೆಗಿನ ರಸ್ತೆಯನ್ನು ಹಂತಹಂತವಾಗಿ ಸ್ಮಾರ್ಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದು, ಹೊಸದಾಗಿ ನಿರ್ಮಿಸಿರುವ ಮಾರುಕಟ್ಟೆಗಳ ಬಾಡಿಗೆ ಪರಿಷ್ಕರಿಸುವ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಬಜೆಟ್ ಮುಖ್ಯಾಂಶಗಳು
* ಪಾಲಿಕೆಯಲ್ಲಿ ಖಾಲಿ ಹುದ್ದೆ ಭರ್ತಿ ಹಾಗೂ ವೇತನಕ್ಕೆ 3500 ಲಕ್ಷ ರೂ. ಹಾಗೂ
* ಆರೋಗ್ಯ, ಸ್ವಚ್ಛತೆ, ಬೀದಿದೀಪ, ನೀರು ಸರಬರಾಜು, ಒಳಚರಂಡಿಗೆ 6938 ಲಕ್ಷ ರೂ. ಕಾಯ್ದಿರಿಸಲಾಗಿದೆ.
* ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಹಣಕಾಸು ಅನುದಾನದಿಂದ 482.50 ಲಕ್ಷ ರು. ಪಾಲಿಕೆ ನಿಧಿಯಿಂದ 335 ಲಕ್ಷ ರೂ. ಇತರ ಬಡಜನರ ಅಭಿವೃದ್ಧಿಗೆ ರಾಜ್ಯ ಹಣಕಾಸು ಅನುದಾನದಿಂದ 145 ಲಕ್ಷ ರೂ. ಹಾಗೂ ಪಾಲಿಕೆ ನಿಧಿಯಿಂದ 102 ಲಕ್ಷ ರೂ., ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರಾಜ್ಯ ಹಣಕಾಸು ಅನುದಾನದಿಂದ 100 ಲಕ್ಷ ರೂ. ಹಾಗೂ ಪಾಲಿಕೆ ನಿಧಿಯಿಂದ 70 ಲಕ್ಷ ರೂ. ಕಾಯ್ದಿರಿಸಲಾಗಿದೆ.
* ನಾಗರಿಕರ ಕ್ರೀಡಾ ಚಟುವಟಿಕೆಗಳಿಗೆ 25 ಲಕ್ಷ ರೂ. ಸಹಾಯಧನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 15 ಲಕ್ಷ ರೂ., ಬೀದಿನಾಯಿ ಕಡಿತ ಸಹಾಯಧನ 3 ಲಕ್ಷ ರೂ.
* ಕಟ್ಟಡ ನಿರ್ವಹಣೆ, ನಿರ್ಮಾಣ: ಮಹಾನಗರ ಪಾಲಿಕೆ ಕಟ್ಟಡಕ್ಕೆ 290 ಲಕ್ಷ ರೂ., ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣ- 3430 ಲಕ್ಷ ರೂ., ಶೌಚಾಲಯ- 390 ಲಕ್ಷ ರೂ., ಕಚೇರಿ ಉಪಕರಣ ಮತ್ತು ಪೀಠೋಪಕರಣ- 60 ಲಕ್ಷ ರೂ., ಪುರಭವನ, ರಂಗಮಂದಿರ ನಿರ್ವಹಣೆ- 150 ಲಕ್ಷ ರೂ. ಕಾಯ್ದಿರಿಸಲಾಗಿದೆ.
* ನೀರು ಸರಬರಾಜು ಮತ್ತು ವಿಸ್ತರಣೆ- 675 ಲಕ್ಷ ರೂ., ತುಂಬೆ ವೆಂಟೆಡ್ ಡ್ಯಾಂ ಭೂಸ್ವಾಧೀನಕ್ಕೆ 1680 ಲಕ್ಷ ಕೂ. ಕಾಯ್ದಿರಿಸಲಾಗಿದೆ.

ವಿಶೇಷ ಯೋಜನೆಗಳಿಲ್ಲದ ನಿರಾಶಾದಾಯಕ ಬಜೆಟ್
ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸಲಾಗಿಲ್ಲ. ವೈಯಕ್ತಿಕ ಸೌಲಭ್ಯದ ಯೋಜನೆ, ಕಾಲನಿಗಳ ಅಭಿವೃದ್ಧಿ, ಆದಾಯದ ಬಗ್ಗೆ ಸ್ಪಷ್ಟತೆಯನ್ನು ಒದಗಿಸಲಾಗಿಲ್ಲ ಎಂದು ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿದರು. ಬಜೆಟ್ ನಿರಾಶಾದಾಯಕ ಎಂದು ಪ್ರತಿಪಕ್ಷದ ಸದಸ್ಯರಾದ ಸುಧೀರ್ ಶೆಟ್ಟಿ, ರೂಪಾಡಿ ಬಂಗೇರ ಪ್ರತಿಕ್ರಿಯಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ, ಮನಪಾವು ಜಾಹೀರಾತಿನಿಂದ ಹೆಚ್ಚಿನ ಹಣ ಸಂಗ್ರಹಿಸುವ ಯೋಜನೆಯೊಂದಿಗೆ ಆದಾಯವನ್ನು ಹೆಚ್ಚಿಸುವ ಕಾರ್ಯ ಮಾಡಬೇಕು ಎನ್ನುತ್ತಾ ಬಜೆಟ್, ಉತ್ತಮ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News