ಪ್ರತಿಪಕ್ಷ ಜೊತೆ ಸಂಧಾನಕ್ಕೆ ಸಿದ್ಧ: ವೆನೆಝುವೆಲ ಅಧ್ಯಕ್ಷ ಮಡುರೊ ಘೋಷಣೆ

Update: 2019-01-30 17:13 GMT

ಮಾಸ್ಕೊ (ರಶ್ಯ), ಜ. 30: ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆ ಎಂದು ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಹೇಳಿದ್ದಾರೆ.

ವೆನೆಝವೆಲದಲ್ಲಿ ಸಂಘರ್ಷ ಸ್ಥಿತಿ ಏರ್ಪಟ್ಟಿರುವ ನಡುವೆಯೇ, ರಶ್ಯದ ಸರಕಾರ ಒಡೆತನದ ಆರ್‌ಐಎ ನೊವೊಸ್ಟಿ ಸುದ್ದಿ ಸಂಸ್ಥೆಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

‘‘ವೆನೆಝುವೆಲದ ಶಾಂತಿ ಮತ್ತು ಭವಿಷ್ಯಕ್ಕಾಗಿ ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆ’’ ಎಂದು ಮಡುರೊ ಹೇಳಿದರು.

ಇತರ ದೇಶಗಳ ಮಧ್ಯಸ್ಥಿಕೆಯೊಂದಿಗೆ ಮಾತುಕತೆಗಳು ನಡೆಯಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಶ್ಯವು ಮಡುರೊ ಅವರ ಕಟ್ಟಾ ಬೆಂಬಲಿಗ ದೇಶಗಳ ಪಟ್ಟಿಯಲ್ಲಿ ಒಂದಾಗಿದೆ ಹಾಗೂ ಸಂಧಾನದಲ್ಲಿ ಮಧ್ಯಸ್ಥಿಕೆ ವಹಿಸುವ ಕೊಡುಗೆಯನ್ನೂ ನೀಡಿದೆ.

ಸ್ವಯಂಘೋಷಿತ ಅಧ್ಯಕ್ಷರಿಗೆ ದೇಶ ತೊರೆಯಲು ನಿಷೇಧ

ಸ್ವಯಂಘೋಷಿತ ಅಧ್ಯಕ್ಷ ಜುವಾನ್ ಗ್ವಾಯಿಡು ದೇಶವನ್ನು ತೊರೆಯದಂತೆ ವೆನೆಝುವೆಲದ ಉನ್ನತ ನ್ಯಾಯ ಮಂಡಳಿ ಮಂಗಳವಾರ ಆದೇಶ ನೀಡಿದೆ ಹಾಗೂ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ.

ಅಮೆರಿಕ ಬೆಂಬಲಿತ ಪ್ರತಿಪಕ್ಷ ನಾಯಕನನ್ನು ದುರ್ಬಲಗೊಳಿಸಲು ಅಧ್ಯಕ್ಷ ನಿಕೊಲಸ್ ಮಡುರೊ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ನ್ಯಾಶನಲ್ ಅಸೆಂಬ್ಲಿಯ ಮುಖ್ಯಸ್ಥರೂ ಆಗಿರುವ ಸ್ವಯಂಘೋಷಿತ ಅಧ್ಯಕ್ಷರಿಗೆ ವೆನೆಝುವೆಲದ ಅಮೆರಿಕ ಬ್ಯಾಂಕ್ ಖಾತೆಗಳ ನಿಯಂತ್ರಣವನ್ನು ನೀಡಲಾಗಿದೆ ಎಂಬುದಾಗಿ ಅಮೆರಿಕದ ವಿದೇಶ ಇಲಾಖೆ ಪ್ರಕಟಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News