ಎಲ್ಲ ಉದ್ಯೋಗ ದತ್ತಾಂಶಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಸಿಪಿಎಂ ಆಗ್ರಹ

Update: 2019-01-31 14:26 GMT

ಹೊಸದಿಲ್ಲಿ,ಜ.31: ಉದ್ಯೋಗ ಕುರಿತು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ(ಎನ್‌ಎಸ್‌ಎಸ್‌ಒ)ಯ ಅಂಕಿಅಂಶಗಳು ನೋಟು ನಿಷೇಧದ ಬಳಿಕ ದೇಶದಲ್ಲಿ ನಿರುದ್ಯೋಗ ಪ್ರಮಾಣವು ಕಳೆದ ನಾಲ್ಕು ದಶಕಗಳಲ್ಲಿಯೇ ಗರಿಷ್ಠ ಮಟ್ಟವನ್ನು ತಲುಪಿದೆಯೆಂದು ಬೆಟ್ಟುಮಾಡಿರುವುದರಿಂದ ಅದನ್ನು ಸರಕಾರವು ಮುಚ್ಚಿಟ್ಟಿದೆ ಎಂದು ಆರೋಪಿಸಿರುವ ಸಿಪಿಎಂ,ಇಂತಹ ಎಲ್ಲ ಅಂಕಿಅಂಶಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ.

  ನಿರುದ್ಯೋಗ ದತ್ತಾಂಶಗಳ ಕಾರಣದಿಂದಾಗಿಯೇ ಎನ್‌ಎಸ್‌ಎಸ್‌ಒ ವರದಿಯನ್ನು ಬಿಡುಗಡೆಗೊಳಿಸುವ ರಾಷ್ಟ್ರೀಯ ಅಂಕಿಅಂಶಗಳ ಆಯೋಗದ ಇಬ್ಬರು ಸದಸ್ಯರು ರಾಜೀನಾಮೆಯನ್ನು ನೀಡಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಸಿಪಿಎಂ,2011-12ನೇ ಸಾಲಿನಲ್ಲಿದ್ದ ಶೇ.5ಕ್ಕೆ ಹೋಲಿಸಿದರೆ 15ರಿಂದ 29 ವರ್ಷ ವಯೋಮಾನದ ಗ್ರಾಮೀಣ ಪುರುಷರಲ್ಲಿ ನಿರುದ್ಯೋಗದ ಪ್ರಮಾಣ ಶೇ.17.4ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಗ್ರಾಮೀಣ ಯುವತಿಯರಲ್ಲಿ ನಿರುದ್ಯೋಗದ ಪ್ರಮಾಣವು ಶೇ.4.8ರಿಂದ ಶೇ.13.6ಕ್ಕೆ ಹೆಚ್ಚಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯಾವಂತ ಯುವಜನರಲ್ಲಿ ನಿರುದ್ಯೋಗ ಪ್ರಮಾಣವು ಅತ್ಯಧಿಕ ಮಟ್ಟವನ್ನು ದಾಖಲಿಸಿದೆ. ಈ ಮಾಹಿತಿಯು ಬಹಿರಂಗಗೊಳ್ಳದಂತೆ ಮೋದಿ ಸರಕಾರವು ಮುಚ್ಚಿಡುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದೆ.

ಈ ಹಿಂದೆ 2016-17ನೇ ಸಾಲಿನ ಕಾರ್ಮಿಕ ಘಟಕದ ವಾರ್ಷಿಕ ಸಮೀಕ್ಷಾ ವರದಿಯನ್ನೂ ಬಿಡುಗಡೆ ಮಾಡಲು ಮೋದಿ ಸರಕಾರವು ನಿರಾಕರಿಸಿತ್ತು ಎಂದು ಅದು ಆಪಾದಿಸಿದೆ.

ದತ್ತಾಂಶಗಳನ್ನು ಮುಚ್ಚಿಡುವುದರೊಂದಿಗೆ ತನ್ನ ನೀತಿಗಳು ಜನರನ್ನು ಅಪಾರ ಸಂಕಷ್ಟಗಳಿಗೆ ತಳ್ಳಿದೆ ಎನ್ನುವುದನು ್ನಮೋದಿ ಸರಕಾರವು ಸ್ಪಷ್ಟವಾಗಿ ಒಪ್ಪಿಕೊಂಡಿದೆ. ನಮ್ಮ ಆಸ್ತಿಯಾಗಿರುವ ಭಾರತದ ಯುವಜನರ ಸಾಮರ್ಥ್ಯ ಈಗ ವ್ಯರ್ಥವಾಗುತ್ತಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಒದಗಿಸುವ ತನ್ನ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ನೇತೃತ್ವದ ಸರಕಾರದ ಸಂಪೂರ್ಣ ವೈಫಲ್ಯವನ್ನೂ ಇದು ಬಯಲಿಗೆಳೆದಿದೆ ಎಂದು ಸಿಪಿಎಂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News