ಬಿಸಿಎಎಸ್‌ಗೆ ರಾಕೇಶ್ ಅಸ್ತಾನ ನಿಯೋಜನೆ: ಸುಪ್ರೀಂ ಕೋರ್ಟ್‌ನಿಂದ ಪಿಐಎಲ್ ತಿರಸ್ಕೃತ
ಹೊಸದಿಲ್ಲಿ, ಜ. 31: ನಾಗರಿಕ ವಾಯು ಯಾನ ಭದ್ರತಾ ಘಟಕ (ಬಿಸಿಎಎಸ್)ದ ಪ್ರಧಾನ ನಿರ್ದೇಶಕರನ್ನಾಗಿ ಸಿಬಿಐಯ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರನ್ನು ನಿಯೋಜಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿ ಹಾಕಿದೆ. ಬಿಸಿಎಎಸ್‌ಗೆ ಅಸ್ತಾನ ಅವರನ್ನು ನಿಯೋಜಿಸಿರುವುದನ್ನು ಪ್ರಶ್ನಿಸಿ ನ್ಯಾಯವಾದಿ ಎಂ.ಎಲ್. ಶರ್ಮಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ತಿರಸ್ಕರಿಸಿದೆ.
ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಅಸ್ತಾನ ವಿರುದ್ಧದ ಪ್ರಥಮ ಮಾಹಿತಿ ವರದಿ ರದ್ದುಗೊಳಿಸಲು ಜನವರಿ 11ರಂದು ನಿರಾಕರಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯ, ತನಿಖೆ ಪೂರ್ಣಗೊಳಿಸಲು 10 ವಾರಗಳ ಸಮಯಾವಕಾಶ ನೀಡಿತ್ತು. ನಾಗರಿಕ ವಾಯು ಯಾನ ಭದ್ರತೆಗಿರುವ ಭಾರತದ ನಿಯಂತ್ರಣ ಮಂಡಳಿ (ಬಿಸಿಎಎಸ್)ಗೆ ಅಸ್ತಾನ ಅವರನ್ನು ಕೇಂದ್ರ ಸರಕಾರ ಜನವರಿ 18ರಂದು ನಿಯೋಜಿಸಿತ್ತು. ಈ ನಿಯೋಜನೆ ಕಾನೂನಿಗೆ ವಿರುದ್ಧವಾದದು ಹಾಗೂ ಆರೋಪದ ತನಿಖೆಯ ಹಿನ್ನೆಲೆಯಲ್ಲಿ ಅಸ್ತಾನ ಅವರನ್ನು ಅಮಾನತುಗೊಳಿಸಬೇಕು ಎಂದು ಮನವಿ ಹೇಳಿತ್ತು. ಕರ್ತವ್ಯದಲ್ಲಿರುವಾಗ ಲಂಚ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿ ಅಸ್ತಾನ ಅವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ.
ವರ್ಗೀಕರಣ, ನಿಯಂತ್ರಣ, ಮನವಿ (ಸಿಸಿಎ) ಕಾಯ್ದೆ 1965ಕ್ಕೆ ಅವರ ನಿಯೋಜನೆ ವಿರುದ್ಧವಾದುದು ಎಂದು ಮನವಿಯಲ್ಲಿ ಹೇಳಲಾಗಿದೆ. ಕರ್ತವ್ಯದ ಸಂದರ್ಭದಲ್ಲಿ ಲಂಚ ಸ್ವೀಕರಿಸಿದ ಆರೋಪದ ಪ್ರಥಮ ಮಾಹಿತಿ ವರದಿ ಬಗ್ಗೆ ದಿಲ್ಲಿ ಉಚ್ಚ ನ್ಯಾಯಾಲಯದ ಅಡಿಯಲ್ಲಿ ತನಿಖೆ ಬಾಕಿ ಇರುವ ಸಂದರ್ಭ ಅವರನ್ನು 1965ರ ನಿಯಮದ ಪ್ರಕಾರ ಅವರನ್ನು ಅಮಾನತುಗೊಳಿಸುವುದರ ಬದಲು ಬಿಸಿಎಎಸ್‌ಗೆ ಬಡ್ತಿ ನೀಡಿ ನಿಯೋಜಿಸಲಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.