ಸರಕಾರಿ ಶಾಲೆ ಉಳಿಸಲು ಹೀಗೊಂದು ಅಭಿಯಾನ

Update: 2019-01-31 14:50 GMT

#ಸರಕಾರದ ಗಮನ ಸೆಳೆಯಲು ಹಳೆ ವಿದ್ಯಾರ್ಥಿಗಳ ಹರಸಾಹಸ

ಮಂಗಳೂರು, ಜ.31: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ನಗರದ ಪುರಭವನದ ಮುಂಭಾಗದ ಮೆಟ್ಟಲುಗಳ ಮಧ್ಯೆ ಗುರುವಾರ ಇಬ್ಬರು ಯುವಕರು ರಟ್ಟಿನ ಮಾದರಿಯ ಶಾಲೆಯೊಂದನ್ನು ನಿರ್ಮಿಸಿ ‘ನೀವು ಕನ್ನಡ ಅಭಿಮಾನಿಯೇ, ನಮ್ಮೂರು ಸರಕಾರಿ ಕನ್ನಡ ಶಾಲೆ ಉಳಿಸಲು ಕನಿಷ್ಠ 10 ರೂ. ದಾನ ಮಾಡುವಿರಾ?’ ಎಂಬ ಮನವಿಯ ಪೋಸ್ಟರ್ ಹಿಡಿದು ಗಮನ ಸೆಳೆದಿದ್ದಾರೆ.

ಬಂಟ್ವಾಳ ತಾಲೂಕಿನ ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ವ್ಯಕ್ತಿಯೊಬ್ಬರ ಪಟ್ಟಾ ಜಮೀನಿನಲ್ಲಿದೆ. ಸುಮಾರು 55 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಇದೀಗ 1ರಿಂದ 7ನೆ ತರಗತಿಯ 64 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸರಕಾರಿ ಶಾಲೆಯಾದರೂ ಕೂಡ ಕಟ್ಟಡವು ಖಾಸಗಿ ವ್ಯಕ್ತಿಯ ಜಮೀನಿನಲ್ಲಿರುವುದರಿಂದ ಸರಕಾರದಿಂದ ಯಾವುದೇ ಅನುದಾನ ಈ ಶಾಲೆಗೆ ಬರುತ್ತಿಲ್ಲ. ಅಲ್ಲದೆ ಕಟ್ಟಡ ದುರಸ್ತಿಗೂ ಅವಕಾಶ ಸಿಗುತ್ತಿಲ್ಲ ಎನ್ನಲಾಗಿದೆ. ಹಾಗಾಗಿ ಶಾಲಾ ಕಟ್ಟಡವು ದುಸ್ಥಿತಿಯಲ್ಲಿವೆ. ಶಾಲೆಯನ್ನು ಹೇಗಾದರು ಉಳಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು ಎಂಬ ನಿಟ್ಟಿನಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ವೃತ್ತಿಯ ಮಧ್ಯೆ ಬಿಡುವು ಮಾಡಿಕೊಂಡು ಹಳೆ ವಿದ್ಯಾರ್ಥಿ ಸಂಘದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ಇದೀಗ ವಿನೂತನ ರೀತಿಯಲ್ಲಿ ಅಭಿಯಾನ ಆರಂಭಿಸಿದ್ದಾರೆ.

ತಿಂಗಳ ಹಿಂದೆ ಬೆಂಗಳೂರಿನಲ್ಲಿ ರಟ್ಟಿನ ಮಾದರಿಯ ಶಾಲೆಯನ್ನು ನಿರ್ಮಿಸಿ ಧನ ಸಂಗ್ರಹಕ್ಕೆ ಇಳಿದಿದ್ದ ವೃತ್ತಿಯಲ್ಲಿ ಕಲಾವಿದನಾಗಿರುವ ಜಯರಾಮ ಮತ್ತು ಮೆಡಿಕಲ್ ಪ್ರತಿನಿಧಿಯಾಗಿರುವ ವಿನಯ್ ಎಂಬಿಬ್ಬರು ಯುವಕರು ಇದೀಗ ಮಂಗಳೂರಿನಲ್ಲಿ ಕೂಡಾ ಅಭಿಯಾನ ಮುಂದುವರಿಸಿದ್ದಾರೆ. ಇವರೊಂದಿಗೆ ಇತರ ವಿದ್ಯಾರ್ಥಿಗಳು ಕೂಡ ಸಾಥ್ ನೀಡುತ್ತಾರೆ.

‘49 ಸೆಂಟ್ಸ್ ವಿಸ್ತೀರ್ಣದಲ್ಲಿರುವ ಈ ಶಾಲೆಯು ಖಾಸಗಿ ವ್ಯಕ್ತಿಯ ಬಳಿ ಇದೆ. ಅದನ್ನು ಶಾಲೆಯ ಹೆಸರಿಗೆ ಮಾಡಿಸಿಕೊಳ್ಳಲು ಆ ಜಮೀನಿನ ಮಾಲಕರು ಹಣ ಕೇಳುತ್ತಿದ್ದಾರೆ. ಅವರು ಕೇಳುವಷ್ಟು ಹಣ ಕೊಡಲು ನಮ್ಮಲ್ಲಿಲ್ಲ. ಅದಕ್ಕಾಗಿ ಈ ಮೂಲಕ ಧನ ಸಂಗ್ರಹಕ್ಕೆ ಇಳಿದಿದ್ದೇವೆ. ಒಬ್ಬೊಬ್ಬರು ಕನಿಷ್ಠ 10 ರೂ. ನೀಡಿದರೆ ಒಂದಷ್ಟು ಹಣ ಸಂಗ್ರಹವಾದೀತು ಎಂಬ ವಿಶ್ವಾಸ ನಮ್ಮದು. ಈಗಾಗಲೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪ್ರಯೋಜನವಾಗಲಿಲ್ಲ. ನಮ್ಮೀ ವಿಶಿಷ್ಟ ಅಭಿಯಾನದ ಮೂಲಕ ಅವರು ಎಚ್ಚೆತ್ತುಕೊಂಡಾರು ಎಂಬ ಆಸೆ ನಮ್ಮದಾಗಿದೆ’ ಎಂದು ಜಯರಾಮ ಮತ್ತು ವಿನಯ್ ಹೇಳುತ್ತಾರೆ.

ನಮ್ಮೀ ವಿಶಿಷ್ಟ ಅಭಿಯಾನದ ಬಗ್ಗೆ ಹಲವರು ನಾನಾ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ, ಸಂಶಯ ವ್ಯಕ್ತಪಡಿಸುತ್ತಾರೆ. ನಾವು ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇವೆ. ನಾವು ಕಲಿತ ಈ ಶಾಲೆಯ ಉಳಿಯಬೇಕು ಎಂಬುದೇ ನಮ್ಮ ಅಭಿಲಾಶೆಯಾಗಿದೆ. ಆಂಗ್ಲಮಾಧ್ಯಮ ಶಾಲೆಗಳ ಆರ್ಭಟದ ಮಧ್ಯೆ ಕನ್ನಡ ಶಾಲೆಗಳು ಮುಚ್ಚಬಾರದು ಎಂಬ ನಿಟ್ಟಿನಲ್ಲಿ ಮೂರು ವರ್ಷದ ಹಿಂದೆ 1ನೆ ತರಗತಿಯಿಂದಲೇ ಇಂಗ್ಲಿಷ್ ಪಠ್ಯ ಬೋಧಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ ಇಲ್ಲೀಗ 64 ಮಕ್ಕಳು ಕಲಿಯುತ್ತಿದ್ದಾರೆ. ಮುಂದೆಯೂ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಖಾಸಗಿ ವ್ಯಕ್ತಿಯ ಹೆಸರಿನಲ್ಲಿರುವ ಜಮೀನನ್ನು ಶಾಲೆಯ ಹೆಸರಿನಲ್ಲಿ ಮಾಡದೆ ನಮಗೆ ನಿರ್ವಾಹವಿಲ್ಲ ಎಂದು ಜಯರಾಮ ಮತ್ತು ವಿನಯ್ ವಿಷಾದಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News