ಗಾಂಧಿ ಪ್ರತಿಕೃತಿಗೆ ಗುಂಡು ಹಾರಾಟ: ಮೂವರ ಬಂಧನ

Update: 2019-01-31 15:31 GMT

ಅಲಿಗಡ್,ಜ.31: ಉತ್ತರ ಪ್ರದೇಶದ ಅಲಿಗಡ್‌ನಲ್ಲಿ ಹಿಂದೂ ಮಹಾಸಭಾದ ಸದಸ್ಯರು ಮಹಾತ್ಮಾ ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗಾಂಧೀಜಿಯ 71ನೇ ಪುಣ್ಯತಿಥಿಯ ಸಂದರ್ಭದಲ್ಲಿ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಗಾಂಧೀಜಿಯ ಪ್ರತಿಕೃತಿಗೆ ಗುಂಡು ಹಾರಿಸಿ ನಂತರ ದಹಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಮಧ್ಯೆ ಪೊಲೀಸರು ಈ ಸಂಬಂಧ ಹದಿಮೂರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸದ್ಯ ಪೂಜಾ ಶಕುನ್ ತಲೆಮರೆಸಿಕೊಂಡಿದ್ದು ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಸದಸ್ಯನಾಗಿದ್ದ ಹಿಂದೂ ಮಹಾಸಭಾದ ಕಾರ್ಯಕರ್ತರು ಗೋಡ್ಸೆ ಪ್ರತಿಮೆಗೆ ಹೂಹಾರ ಹಾಕಿ ಸಿಹಿತಿಂಡಿಯನ್ನು ಹಂಚಿದ್ದರು. ಈ ಕುರಿತು ಹೇಳಿಕೆ ನೀಡಿದ್ದ ಪೂಜಾ ಶಕುನ್, ಗಾಂಧಿ ಹತ್ಯೆಯನ್ನು ಪುನರ್‌ಸೃಷ್ಟಿಸುವ ಮೂಲಕ ನಾವು ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದ್ದೇವೆ. ಇನ್ನು ಮುಂದೆ ಈ ಸಂಪ್ರದಾಯ ಪ್ರತಿವರ್ಷ ದಸರಾದ ಸಮಯದಲ್ಲಿ ರಾವಣನನ್ನು ಸುಡುವಂತೆ ಮುಂದುವರಿಯಲಿದೆ ಎಂದು ತಿಳಿಸಿದ್ದರು. 1915ರಲ್ಲಿ ಮದನ್ ಮೋಹನ ಮಾಳವಿಯ ಸ್ಥಾಪಿಸಿದ ಹಿಂದೂ ಮಹಾಸಭಾ ಮಹಾತ್ಮಾ ಗಾಂಧೀಜಿ ಹತ್ಯೆಯಾದ ದಿನವನ್ನು ನಾಥೂರಾಮ್ ಗೋಡ್ಸೆಯ ಗೌರವಾರ್ಥವಾಗಿ ಶೌರ್ಯ ದಿವಸವನ್ನಾಗಿ ಆಚರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News