ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಮೆರವಣಿಗೆ ನಿಷೇಧಕ್ಕೆ ಚಿಂತನೆ: ಮಂಗಳೂರು ಪೊಲೀಸ್ ಆಯುಕ್ತ

Update: 2019-02-01 16:08 GMT

ಮಂಗಳೂರು, ಫೆ.1: ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆ ಹಾಗೂ ರಸ್ತೆಗಳ ಅಗಲೀಕರಣಕ್ಕೆ ಸ್ಥಳಾವಕಾಶದ ಕೊರತೆಯಿಂದಾಗಿ ಸಂಚಾರ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗಿನ ರಸ್ತೆಗಳಲ್ಲಿ ನಡೆಸಲಾಗುವ ಯಾವುದೇ ರೀತಿಯ ಮೆರವಣಿಗೆಗಳನ್ನು ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ನಗರದಲ್ಲಿ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಅಗಲೀಕರಣಗೊಳಿಸಲು ಸಾಧ್ಯವಾಗುತ್ತಿಲ್ಲ. ಪ್ರತೀ ವರ್ಷ 1 ಲಕ್ಷ ವಾಹನಗಳು ನಗರ ಸಂಚಾರಕ್ಕೆ ಸೇರ್ಪಡೆಯಾಗುತ್ತಿವೆ. ಇದಕ್ಕೆ ಅನುಗುಣವಾಗಿ ರಸ್ತೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇಂತಹ ವ್ಯವಸ್ಥೆಯಲ್ಲಿ ಆಗಾಗ್ಗೆ ಈ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಗಳಿಂದ ಜನಸಾಮಾನ್ಯರ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಅವರು ಹೇಳಿದರು.

ಇದೇ ವೇಳೆ ನಗರದ ನೆಹರೂ ಮೈದಾನದಲ್ಲಿ ಯಾವುದೇ ಸಮಾವೇಶ, ಕಾರ್ಯಕ್ರಮ, ಪ್ರತಿಭಟನೆಗಳನ್ನು ನಡೆಸುವ ವೇಳೆ ಅಲ್ಲಿನ ಎರಡು ಮೈದಾನ(ಫುಟ್ಬಾಲ್ ಮೈದಾನ ಸೇರಿ)ಗಳಲ್ಲಿ ಒಂದನ್ನು ಕಡ್ಡಾಯವಾಗಿ ಪಾರ್ಕಿಂಗ್ ವ್ಯವಸ್ಥೆಗೆ ಮೀಸಲಿಡುವ ನಿಯಮ ಅಳವಡಿಕೆಗೂ ಇಲಾಖೆ ಚಿಂತಿಸಿದೆ ಎಂದು ಆಯುಕ್ತರು ತಿಳಿಸಿದರು.

ಕಲ್ಯಾಣ ಮಂಟಪ, ಖಾಸಗಿ ಜಾಗಗಳಲ್ಲಿ ವಿವಾಹ ಹಾಗೂ ಇನ್ನಿತರ ಕಾರ್ಯಕ್ರಮಗಳ ಸಂದರ್ಭ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಉಂಟಾಗುತ್ತಿರುವ ಅಡಚಣೆಯನ್ನು ನಿವಾರಿಸುವ ಸಲುವಾಗಿ ಸ್ಥಳೀಯ ನಗರ ಪಾಲಿಕೆ, ಗ್ರಾಪಂ ಪುರಸಭೆಗಳಿಂದ ಜಾಗೃತಿ ಅಥವಾ ಸೂಚನೆ ನೀಡುವ ಕುರಿತಂತೆ ಸಭೆ ನಡೆಸಲು ಕೂಡಾ ಆಲೋಚಿಸಲಾಗಿದೆ ಎಂದು ಅವರು ಹೇಳಿದರು. ನಗರದಲ್ಲಿ ಡ್ರಗ್ಸ್ ಹಾವಳಿ ಕುರಿತಂತೆ ಪೊಲೀಸ್ ಇಲಾಖೆ ಕಟ್ಟು ನಿಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದೆ. ರೌಡಿಸಂ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿ ಕಾರ್ಯಗಳನ್ನು ಇಲಾಖೆ ನಡೆಸುತ್ತಿದೆ ಎಂದವರು ಹೇಳಿದರು.

ಹಿಂದಿನ ಆಯುಕ್ತ ಚಂದ್ರಶೇಖರ್ ಅವರು ಆರಂಭಿಸಿದ ಫೋನ್ ಇನ್ ಕಾರ್ಯಕ್ರಮವು ಜನರ ಸಮಸ್ಯೆಗಳ ಬಗ್ಗೆ ನೇರವಾಗಿ ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸಿದೆ. ಇದು ಜನಸ್ನೇಹಿಯಾಗಿ ಮುಂದುವರಿಯುತ್ತಿದ್ದು, ವಾರದ ಒಂದು ಗಂಟೆಯಲ್ಲಿ 35ರಷ್ಟು ಮಂದಿಯಿಂದ ಸಮಸ್ಯೆಗಳನ್ನು ನೇರವಾಗಿ ತಿಳಿದು ಪರಿಹಾರ ಕ್ರಮಗಳಿಗೆ ಸಹಕಾರಿಯಾಗಿದೆ. ನಗರದ ಕಾನೂನು ಸುವ್ಯವಸ್ಥೆ ಪರಿಣಾಮಕಾರಿಯಾಗಿದ್ದಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಟಿ.ಆರ್. ಸುರೇಶ್ ನುಡಿದರು.

ಸಂವಾದದಲ್ಲಿ ಡಿಸಿಪಿ ಉಮಾ ಪ್ರಶಾಂತ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು. 


ಹಾರ್ನ್ ರಹಿತ ವಲಯ ಶೀಘ್ರ ಕಾರ್ಯಾಚರಣೆ

 ನಗರದಲ್ಲಿ ಸುಗಮ ಸಂಚಾರಕ್ಕೆ ಒತ್ತು ನೀಡಿ ಹಾನ್ ರಹಿತ ದಿನವನ್ನಾಗಿಸುವ ಬದಲು ಹಾರ್ನ್ ರಹಿತ ವಲಯಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹೇಳಿದರು.

ಈ ಹಿಂದೆ ಈಗಾಗಲೇ ನಗರದ ಹಂಪನಕಟ್ಟೆಯಿಂದ ಕ್ಲಾಕ್ ಟವರ್ ಹಾಗೂ ಅತ್ತಾವರ ಕೆಎಂಸಿಯಿಂದ ಮಿಲಾಗ್ರಿಸ್ ರಸ್ತೆಯನ್ನು ಹಾನ್ ರಹಿತ ವಲಯಗಳನ್ನಾಗಿ ಗುರುತಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆ ಅಧಿಸೂಚನೆಯನ್ನು ಶೀಘ್ರವೇ ಮರು ಅನುಷ್ಠಾನಗೊಳಿಸಲಾಗುವುದು. ಆರಂಭದಲ್ಲಿ ಒಂದು ವಾರ ಜಾಗೃತಿ ಮೂಡಿಸುವ ಕೆಲಸ ಈ ವಲಯದಲ್ಲಿ ಮಾಡಲಾಗುವುದು. ಶಾಲಾ ಮಕ್ಕಳಿಂದ ಭಿತ್ತಿಪತ್ರಗಳ ಮೂಲಕ ಈ ಪ್ರದೇಶಗಳಲ್ಲಿ ಹಾರ್ನ್ ಹಾಕದಿರುವಂತೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು. ಬಳಿಕ ಪ್ರಕರಣ ದಾಖಲಿಸಿ ದಂಡ ವಿಧಿಸುವ ಕ್ರಮವನ್ನು ಪೊಲೀಸ್ ಇಲಾೆ ಮಾಡಲಿದೆ ಎಂದು ಆಯುಕ್ತರು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News