​ಅಗಲಿದ ಯಕ್ಷಗಾನ ಕಲಾವಿದರ ಕುಟುಂಬದ ನೆರವಿಗಾಗಿ ‘ದಾನದೀವಿಗೆ’

Update: 2019-02-01 12:47 GMT

ಕೋಟ, ಫೆ.1: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯಕ್ಷಗಾನ ಕಲಾವಿದರಾದ ರವಿರಾಜ ಜನ್ಸಾಲೆ, ಪ್ರಸನ್ನ ಆಚಾರ್ಯ ಹಾಗೂ ದಿನೇಶ್ ಹೆನ್ನಾಬೈಲು ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ಕರಾವಳಿ ಯಕ್ಷ ಸಂಘಟಕ ಮಿತ್ರರ ಆಶ್ರಯದಲ್ಲಿ ಫೆ.3ರಂದು ರಾತ್ರಿ 8:30ರಿಂದ ದಾನದೀವಿಗೆ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಕೋಟೇಶ್ವರದಲ್ಲಿ ಆಯೋಜಿಸ ಲಾಗಿದೆ.

ರವಿರಾಜ್ ಜನ್ಸಾಲೆ ಕಮಲಶಿಲೆ ಮೇಳದ ಸಂಗೀತಗಾರರಾಗಿದ್ದರೆ, ಪ್ರಸನ್ನ ಆಚಾರ್ಯ 13ವರ್ಷದಿಂದ ಸೌಕೂರು ಮೇಳದಲ್ಲಿ ದುಡಿಯುತ್ತಿದ್ದರು. ಅದೇ ರೀತಿ ದಿನೇಶ್ ಹೆನ್ನಾಬೈಲು ಕೂಡ ಸೌಕೂರು ಮೇಳದಲ್ಲಿ ಸ್ತ್ರೀಪಾತ್ರಧಾರಿಯಾಗಿ ದ್ದರು. ಮೃತ ಕಲಾವಿದರು ಮನೆಗೆ ಆಧಾರಸ್ತಂಭವಾಗಿದ್ದರು. ದುಡಿಯುವ ಕೈಗಳೇ ಇಲ್ಲದೆ ಇದೀಗ ಈ ಕಲಾವಿದರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಕಾರ್ಯಕ್ರಮದ ಸಂಘಟಕ ವಿಜಯ ಕುಮಾರ್ ಶೆಟ್ಟಿ ಯಳಂತೂರು ಬ್ರಹ್ಮಾವರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಯಕ್ಷರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾಲಿಗ್ರಾಮ ಮೇಳ, ಜಲವಳ್ಳಿ ಮೇಳಗಳ ಕಲಾವಿದರು ಹಾಗೂ ಬಡಗಿನ ಪ್ರಸಿದ್ದ 100ಕ್ಕೂ ಹೆಚ್ಚು ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಇಲ್ಲಿ ಸಂಗ್ರಹವಾಗುವ ಹಣವನ್ನು ಸಂಪೂರ್ಣವಾಗಿ ಈ ಕಲಾ ವಿದರುಗಳ ಕುಟುಂಬಗಳಿಗೆ ನೀಡಲಾಗುವುದು ಎಂದು ಸಂಘಟಕರಾದ ಉದಯ ಶೆಟ್ಟಿ ಪಡುಕರೆ ಹೇಳಿದರು.

ಇದೊಂದು ಮಾನವೀಯ ನೆಲೆಯ ಕಾರ್ಯಕ್ರಮವಾಗಿದ್ದು, ಸಹಕಾರ ನೀಡುವವರು ಕರ್ಣಾಟಕ ಬ್ಯಾಂಕ್ ಗೋಳಿಯಂಗಡಿ -ಹಿಲಿಯಾಣ ಶಾಖೆಯ ದಾನದೀವಿಗೆ ಖಾತೆ ಸಂಖ್ಯೆ-2742500100354101, ಐಎಫ್‌ಎಸ್‌ಸಿ: ಕೆಎಆರ್‌ಬಿ0000274 ಇದಕ್ಕೆ ಹಣ ಜಮಾ ಮಾಬಹುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೈಕು ಸುಂದರ ಎತ್ತಿನಟ್ಟಿ, ರಾಘವೇಂದ್ರ ಚಾತ್ರಮಕ್ಕಿ, ಗಜೇಂದ್ರ ಆಚಾರ್ ಕೋಣಿ, ಪ್ರಶಾಂತ ಮಲ್ಯಾಡಿ, ಶ್ರೀಕಾಂತ್ ಆಚಾರ್ಯ ಕೋಟೇಶ್ವರ, ಅವಿನಾಶ್ ಶೆಟ್ಟಿ ದೊಡ್ಮನೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News