ಉದ್ಯೋಗ ಏರಿಕೆ ತೋರಿಸಲಿರುವ ಹೊಸ ವರದಿ ಸಿದ್ಧಪಡಿಸಲಿರುವ ಕೇಂದ್ರ: ಪ್ರಧಾನಿ ಆರ್ಥಿಕ ಸಲಹೆಗಾರ
ಹೊಸದಿಲ್ಲಿ, ಫೆ. 1: ಉದ್ಯೋಗ ಸೃಷ್ಟಿಯಲ್ಲಿ ಗಣನೀಯ ಏರಿಕೆಯಾಗಿರುವುದನ್ನು ತೋರಿಸುವ ಹೊಸ ಉದ್ಯೋಗ ವರದಿಯನ್ನು ಕೇಂದ್ರ ಸಿದ್ಧಪಡಿಸಲಿದೆ ಎಂದು ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹೆಗಾರ ಬಿಬೇಕ್ ದೇಬ್‌ರಾಯ್ ಶುಕ್ರವಾರ ತಿಳಿಸಿದ್ದಾರೆ.
ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ ದತ್ತಾಂಶವನ್ನು ಉಲ್ಲೇಖಿಸಿ ವರದಿಯೊಂದು ಪ್ರಕಟವಾದ ಬಳಿಕ ಅವರ ಈ ಹೇಳಿಕೆ ಹೊರ ಬಿದ್ದಿದೆ. ವರದಿಯಲ್ಲಿ ಭಾರತದಲ್ಲಿ ಕಳೆದ 45 ವರ್ಷಗಳಲ್ಲಿ 2017-18ರಲ್ಲಿ ಅತ್ಯಧಿಕ ನಿರುದ್ಯೋಗ ದರ ದಾಖಲಾಗಿದೆ ಎಂದು ಹೇಳಲಾಗಿತ್ತು. ಉದ್ಯೋಗದಲ್ಲಿ ನಡೆಯುತ್ತಿರುವುದು ಬಹುತೇಕ ರಾಜ್ಯ ಸರಕಾರವನ್ನು ಅವಲಂಬಿಸಿರುತ್ತದೆ ಎಂದು ದೇಬ್‌ರಾಯ್ ಫೇಸ್‌ಬುಕ್‌ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಶೇರ್ ಮಾಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಉದ್ಯೋಗದಲ್ಲಿ ಮೋದಿ ಸರಕಾರದ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ ಎಂದು ಅವರು ಹೇಳಿದರು. ಆದಾಗ್ಯೂ, ಸಂಸ್ಥೆಗಳು ಕಾರ್ಯನಿರ್ವಹಿಸಲು ಹಾಗೂ ಉದ್ಯಮಗಳು ಬೆಳೆಯಲು ಬೇಕಾದ ಪರಿಸರವನ್ನು ಕೇಂದ್ರ ಸರಕಾರ ರೂಪಿಸಿ ಕೊಡುತ್ತದೆ. ಸ್ವ ಉದ್ಯೋಗ ಉತ್ತೇಜಿಸುವ ಮೂಲಕ ಮೋದಿ ಸರಕಾರ ಮಾಡುತ್ತಿರುವುದು ಇದನ್ನೇ ಎಂದು ದೇಬ್‌ರಾಯ್ ಹೇಳಿದ್ದಾರೆ.