ಆನಂದ ತೇಲ್ತುಂಬ್ಡೆ ವಿರುದ್ಧದ ಆರೋಪ ಹಿಂದೆಗೆಯಲು ವಿಶ್ವಸಂಸ್ಥೆ ನೆರವಿಗೆ ಮನವಿ
ಹೊಸದಿಲ್ಲಿ, ಫೆ. 1: ಆನಂದ ತೇಲ್ದುಂಬೆ ವಿರುದ್ಧದ ನಕಲಿ ಆರೋಪ ಹಿಂದೆ ತೆಗೆಯಬೇಕು ಹಾಗೂ ಈ ವಿಷಯದ ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿ 90ಕ್ಕೂ ಅಧಿಕ ಸಂಘಟನೆಗಳು, 50ಕ್ಕೂ ಅಧಿಕ ಸಂಸ್ಥೆಗಳು ಹಾಗೂ ಬುದ್ಧಿಜೀವಿಗಳಾದ ನೋಮ್ ಚಾಮ್‌ಸ್ಕಿ, ಜೀನ್ ಡ್ರೆಝೆ, ಸುಖ್‌ದೇವ್ ಥೋರಾಟ್, ವಿಮಲ್ ಥೋರಾಟ್, ಕಾರ್ನಲ್ ವೆಸ್ಟ್ ಹಾಗೂ ಕ್ರಿಸ್ಟೋಫೆ ಜಾಫ್ರೆಲೋಟ್ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್‌ಗೆ ಪತ್ರ ಬರೆದಿದ್ದಾರೆ.
ನಕ್ಸಲೀಯರೊಂದಿಗೆ ನಂಟು ಆರೋಪ ಹಾಗೂ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ 10 ಸಾಮಾಜಿಕ ಹೋರಾಟಗಾರರು ಹಾಗೂ ವಕೀಲರೊಂದಿಗೆ ತೇಲ್ದುಂಬ್ಡೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ‘‘ಇದು ಒಂದು ಅತಿ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ’’ ಎಂದು ಪತ್ರದಲ್ಲಿ ಹೇಳಲಾಗಿದೆ. 2017 ಡಿಸೆಂಬರ್ 31ರಂದು ನಡೆದ ಭೀಮಾ ಕೋರೆಗಾವ್ ಕಾರ್ಯಕ್ರಮದಲ್ಲಿ ತೇಲ್ತುಂಬ್ಡೆ ಪಾಲ್ಗೊಂಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಹಾಗೂ ‘ನಕಲಿ ಪತ್ರ’ವನ್ನು ಹಾಜರುಪಡಿಸಿದ ಪುಣೆ ಪೊಲೀಸರನ್ನು ಪತ್ರದಲ್ಲಿ ಟೀಕಿಸಲಾಗಿದೆ. ಡಾ. ತೇಲ್ದುಂಬ್ಡೆ ವಿರುದ್ಧದ ಎಲ್ಲ ಆರೋಪಗಳನ್ನು ಕೂಡಲೇ ಹಿಂದೆ ತೆಗೆಯಲು, ದಬ್ಪಾಳಿಕೆಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ನ್ಯಾಯ ಒದಗಿಸಲು ಭಾರತ ಸರಕಾರದೊಂದಿಗೆ ಮಾತುಕತೆ ನಡೆಸುವಂತೆ ನಾವು ವಿಶ್ವಸಂಸ್ಥೆಯನ್ನು ಆಗ್ರಹಿಸುತ್ತಿದ್ದೇವೆ. ನೀವು ಹಾಗೂ ನಿಮ್ಮ ತಂಡವನ್ನು ವೈಯುಕ್ತಿಕವಾಗಿ ಭೇಟಿಯಾಗಲು ಹಾಗೂ ನಮ್ಮ ಕಳವಳವನ್ನು ವ್ಯಕ್ತಪಡಿಸಲು ಅವಕಾಶ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಎಂದು ಪತ್ರದಲ್ಲಿ ಹೇಳಲಾಗಿದೆ.