×
Ad

ಸರಕಾರದ ಪ್ರತಿ 1 ರೂ.ಆದಾಯದಲ್ಲಿ ತೆರಿಗೆಗಳ ಕೊಡುಗೆ 70 ಪೈಸೆ !

Update: 2019-02-01 21:02 IST

ಹೊಸದಿಲ್ಲಿ,ಫೆ.1: ಸರಕಾರವು ಗಳಿಸುವ ಪ್ರತಿ ಒಂದು ರೂ.ಆದಾಯದಲ್ಲಿ ನೇರ ಮತ್ತು ಪರೋಕ್ಷ ತೆರಿಗೆಗಳ ಕೊಡುಗೆ 70 ಪೈಸೆಗಳಾಗಲಿದ್ದು, ತೆರಿಗೆಗಳು ಮತ್ತು ಸುಂಕಗಳಲ್ಲಿ ರಾಜ್ಯಗಳ ಪಾಲನ್ನು ಪಾವತಿಸಲು ಸರಕಾರವು 23 ಪೈಸೆಗಳನ್ನು ವ್ಯಯಿಸಲಿದೆ.

ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರದ ಮಧ್ಯಂತರ ಮುಂಗಡಪತ್ರದಲ್ಲಿ ಪ್ರತಿ ಒಂದು ರೂ.ಆದಾಯದಲ್ಲಿ ಜಿಎಸ್‌ಟಿಯ ಪಾಲು 21 ಪೈಸೆಗಳಾಗಲಿದೆ ಎಂದು ಅಂದಾಜಿಸಲಾಗಿದ್ದು,ಇದು ಏಕೈಕ ಅತಿದೊಡ್ಡ ಆದಾಯ ಮೂಲವಾಗಲಿದೆ. ಸಾಲ ಮತ್ತು ಇತರ ಬಾಧ್ಯತೆಗಳ ಕ್ರೋಡಿಕರಣದಿಂದ 19 ಪೈಸೆ ಮತ್ತು ಕೇಂದ್ರ ಅಬಕಾರಿ ಸುಂಕದ ರೂಪದಲ್ಲಿ 7 ಪೈಸೆ ಬರಲಿದೆ.

ಹೂಡಿಕೆ ಹಿಂದೆಗೆತದಂತಹ ತೆರಿಗೆಯೇತರ ಆದಾಯಗಳಿಂದ 8 ಪೈಸೆಗಳನ್ನು ಗಳಿಸಲು ಸರಕಾರವು ಉದ್ದೇಶಿಸಿದ್ದು,ಋಣೇತರ ಬಂಡವಾಳ ಪಾವತಿಗಳ ಮೂಲಕ 3 ಪೈಸೆ ಆದಾಯವನ್ನು ಅದು ಕ್ರೋಡೀಕರಿಸಲಿದೆ. ಕಾರ್ಪೊರೇಟ್ ತೆರಿಗೆಗಳಿಂದ ಆದಾಯ ಸಂಗ್ರಹವನ್ನು 21 ಪೈಸೆಗೆ ನಿಗದಿಗೊಳಿಸಲಾಗಿದೆ. ಮುಂದಿನ ಹಣಕಾಸು ವರ್ಷಕ್ಕಾಗಿ ಆದಾಯ ತೆರಿಗೆ ಸಂಗ್ರಹದ ಗುರಿಯನ್ನು 17 ಪೈಸೆಗೆ ಹೆಚ್ಚಿಸಲಾಗಿದೆ. ಇದೇ ಅವಧಿಯಲ್ಲಿ ಸೀಮಾ ಶುಲ್ಕವಾಗಿ 4 ಪೈಸೆ ಆದಾಯ ಬರಲಿದೆ.

ಸರಕಾರದ ವೆಚ್ಚದ ಪ್ರತಿ ಒಂದು ರೂ.ನಲ್ಲಿ ಅತ್ಯಂತ ದೊಡ್ಡ ಭಾಗ ರಾಜ್ಯಗಳ ತೆರಿಗೆ ಮತ್ತು ಸುಂಕಗಳ ಪಾಲು(23 ಪೈಸೆ) ಆಗಿದ್ದು, ಬಡ್ಡಿ ಪಾವತಿಗಾಗಿ 18 ಪೈಸೆ ಹೋಗಲಿದೆ. ರಕ್ಷಣೆಗಾಗಿ ನಿಗದಿಗೊಳಿಸಿರುವ ಅನುದಾನವು ಕಳೆದ ವರ್ಷದ 9 ಪೈಸೆಯಿಂದ 8 ಪೈಸೆಗೆ ತಗ್ಗಿದೆ. ಕೇಂದ್ರೀಯ ಕ್ಷೇತ್ರದ ಯೋಜನೆಗಳಿಗಾಗಿ 12 ಪೈಸೆ ವೆಚ್ಚವಾಗಲಿದ್ದರೆ,ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ 9 ಪೈಸೆ ವ್ಯಯವಾಗಲಿದೆ. ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆಗಳ ವೆಚ್ಚಕ್ಕಾಗಿ 8 ಪೈಸೆಯನ್ನು ಮೀಸಲಿರಿಸಲಾಗಿದೆ. ಇದೇ ರೀತಿ ಸಬ್ಸಿಡಿಗಳು ಮತ್ತು ಪಿಂಚಣಿಗಳಿಗೆ ಅನುಕ್ರಮವಾಗಿ 9 ಮತ್ತು 5 ಪೈಸೆ ವ್ಯಯವಾಗಲಿವೆ. ಇತರ ವೆಚ್ಚಗಳಿಗಾಗಿ ಸರಕಾರವು 8 ಪೈಸೆಗಳನ್ನು ವ್ಯಯಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News