ನ್ಯಾಯ ಎಲ್ಲಿದೆ: ವಿಜಯ ಮಲ್ಯ ಪ್ರಶ್ನೆ

Update: 2019-02-01 16:09 GMT

ಲಂಡನ್, ಫೆ. 1: “ನಾನು ಸಾಲ ಪಡೆದಿರುವ ಬ್ಯಾಂಕ್‌ಗಳ ಒಕ್ಕೂಟದ ಪರವಾಗಿ ನನ್ನ ಕಂಪೆನಿಯ 13,000 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ” ಎಂದು ಉದ್ಯಮಿ ವಿಜಯ ಮಲ್ಯ ಶುಕ್ರವಾರ ಹೇಳಿದ್ದಾರೆ.

ನಾನು ಈ ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿ ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ತನ್ನ ವಿರುದ್ಧದ ವಂಚನೆ ಮತ್ತು ಕಪ್ಪು ಹಣ ಬಿಳುಪು ಆರೋಪಗಳನ್ನೂ ಅವರು ಪ್ರಶ್ನಿಸಿದ್ದಾರೆ.

ನನ್ನ ಸೊತ್ತುಗಳನ್ನು ವಶಪಡಿಸಿಕೊಂಡಿರುವುದು ಅವಮಾನಕಾರಿ ಎಂಬುದಾಗಿಯೂ ಅವರು ಬಣ್ಣಿಸಿದ್ದಾರೆ.

‘‘ಸಾಲ ವಸೂಲಾತಿ ನ್ಯಾಯಮಂಡಳಿಯ ಅಧಿಕಾರಿಯೊಬ್ಬರು ಇತ್ತೀಚೆಗೆ ಬ್ಯಾಂಕ್‌ಗಳ ಒಕ್ಕೂಟದ ಪರವಾಗಿ ಭಾರತದಲ್ಲಿರುವ ನನ್ನ ಉದ್ಯಮ ಗುಂಪಿನ 13,000 ಕೋಟಿ ರೂಪಾಯಿಗೂ ಅಧಿಕ ಸೊತ್ತುಗಳನ್ನು ಮುಟ್ಟುಗೋಲು ಹಾಕಿದ್ದಾರೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘‘ಈಗಲೂ, ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿ ವಂಚಿಸಿ ನಾನು ಓಡಿ ಹೋಗಿದ್ದೇನೆ ಎಂದು ಹೇಳುತ್ತಿದ್ದಾರೆ. ಎಲ್ಲಿದೆ ನ್ಯಾಯ?’’ ಎಂದು ಅವರು ಪ್ರಶ್ನಿಸಿದ್ದಾರೆ.

ಜನವರಿ 5ರಂದು ಮುಂಬೈಯ ವಿಶೇಷ ನ್ಯಾಯಾಲಯವೊಂದು ಮಲ್ಯರನ್ನು ‘ದೇಶಭ್ರಷ್ಟ ಆರ್ಥಿಕ ಅಪರಾಧಿ’ ಎಂಬುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News