ಸಮಾಜದ ಎಲ್ಲ ವರ್ಗವನ್ನು ಸಬಲೀಕರಣಗೊಳಿಸುವ ಬಜೆಟ್: ಪ್ರಧಾನಿ
ಹೊಸದಿಲ್ಲಿ,ಫೆ.1: ಮಧ್ಯಂತರ ಬಜೆಟ್ ಸಮಾಜದ ಎಲ್ಲ ವರ್ಗವನ್ನು ತಲುಪುತ್ತದೆ ಮತ್ತು ಎಲ್ಲರನ್ನೂ ಜೊತೆಯಾಗಿಸಿದೆ ಎಂದು ಅಭಿಪ್ರಾಯಿಸಿರುವ ಪ್ರಧಾನಿ ಮೋದಿ, ಇದು ಮುಂದಿನ ಲೋಕಸಭಾ ಚುನಾವಣೆಯ ನಂತರ ಭಾರತವನ್ನು ಯಾವುದು ನಿರ್ದೇಶಿಸಲಿದೆ ಎಂಬುದರ ಸಣ್ಣ ತುಣುಕು ಮಾತ್ರ ಎಂದು ತಿಳಿಸಿದ್ದಾರೆ.
ಸಂಸತ್‌ನಲ್ಲಿ ಮಧ್ಯಂತರ ಬಜೆಟ್ ಮಂಡನೆಯಾದ ನಂತರ ಮಾತನಾಡಿದ ಪ್ರಧಾನಿ, ಈ ಬಜೆಟ್ ಜನರನ್ನು ಸಬಲಗೊಳಿಸುತ್ತದೆ ಎಂದು ತಿಳಿಸುತ್ತಾ ತನ್ನ ಹೇಳಿಕೆಯನ್ನು ಸಮರ್ಥಿಸಲು ಬಜೆಟ್‌ನಲ್ಲಿ ಘೋಷಿಸಲಾದ ಹಲವು ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ.
12 ಕೋಟಿಗೂ ಅಧಿಕ ರೈತರು, ಮೂರು ಕೋಟಿ ಮಧ್ಯಮ ವರ್ಗದ ಕುಟುಂಬಗಳು ಮತ್ತು ಅಸಂಘಟಿತ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ 30-40 ಕೋಟಿ ಕಾರ್ಮಿಕರು ಈ ಬಜೆಟ್‌ನಿಂದ ಲಾಭ ಪಡೆಯಲಿದ್ದಾರೆ. ಸರಕಾರದ ಪ್ರಯತ್ನದಿಂದ ಬಡತನ ದಾಖಲೆ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಎಂದು ಮೋದಿ ತಿಳಿಸಿದ್ದಾರೆ. ನೂತನ ಭಾರತದ ಗುರಿಯನ್ನು ನಿಜವಾಗಿಸುವಲ್ಲಿ 130 ಕೋಟಿ ಪ್ರಜೆಗಳ ಪ್ರಯತ್ನಕ್ಕೆ ಈ ಬಜೆಟ್ ಶಕ್ತಿ ತುಂಬಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.