ಮಧ್ಯಂತರ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ 93,847.64 ಕೋಟಿ ರೂ.
ಹೊಸದಿಲ್ಲಿ,ಫೆ.1: ಶುಕ್ರವಾರ 2019-20ರ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ ಕೇಂದ್ರ ಸರಕಾರ ಶಿಕ್ಷಣ ಕ್ಷೇತ್ರಕ್ಕೆ 93,847.64 ಕೋಟಿ ರೂ. ಮೀಸಲಿರಿಸಿದೆ. ಈ ಮೊತ್ತವು ಕಳೆದ ಬಜೆಟ್‌ನಲ್ಲಿ ನೀಡಿದ ಅನುದಾನಕ್ಕಿಂತ ಶೇ.10 ಹೆಚ್ಚಾಗಿದೆ.
ಉನ್ನತ ಶಿಕ್ಷಣಕ್ಕಾಗಿ 37,461.01 ಕೋಟಿ ರೂ. ಮೀಸಲಿಟ್ಟರೆ ಶಾಲಾ ಶಿಕ್ಷಣಕ್ಕೆ 56,386.63 ಕೋಟಿ ರೂ. ನಿಗದಿಪಡಿಸಲಾಗಿದೆ. ಕಳೆದ ವರ್ಷ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 85,010 ಕೋಟಿ ರೂ. ಮೀಸಲಿಡಲಾಗಿತ್ತು. ಶುಕ್ರವಾರ ಸಂಸತ್‌ನಲ್ಲಿ 2019-20ರ ಮಧ್ಯಂತರ ಬಜೆಟ್ ಮಂಡಿಸಿದ ವಿತ್ತ ಸಚಿವ ಪಿಯೂಶ್ ಗೋಯಲ್ 2022ರ ವೇಳೆಗೆ ಶಿಕ್ಷಣದಲ್ಲಿ ಮೂಲಭೂತ ಸೌಕರ್ಯ ಮತ್ತು ವ್ಯವಸ್ಥೆಯ ಪುನಶ್ಚೇತನ (ರೈಸ್) ಎಂಬ ಹೊಸ ಯೋಜನೆಗೆ ಚಾಲನೆ ನೀಡಿದರು.
ಈ ಯೋಜನೆಯಡಿ ಮುಂದಿನ ನಾಲ್ಕು ವರ್ಷಗಳಲ್ಲಿ ಆರೋಗ್ಯ ಸಂಸ್ಥೆಗಳು ಸೇರಿದಂತೆ ಅಗ್ರ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಸಂಬಂಧಿತ ಮೂಲಭೂತ ಸೌಕರ್ಯಗಳಲ್ಲಿ ಹೂಡಿಕೆ ಮಾಡಲು ಒಂದು ಲಕ್ಷ ಕೋಟಿ ರೂ. ನಿಗದಿಪಡಿಸಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ ಸರಕಾರ 608.87 ಕೋಟಿ ರೂ. ನಗದಿಪಡಿಸಿದ್ದು ಇದು ಈ ಹಿಂದಿನ 350.23 ಕೋಟಿ ರೂ.ಗಿಂತ ಬಹಳಷ್ಟು ಹೆಚ್ಚಾಗಿದೆ.