ಡೇವಿಸ್‌ಕಪ್: ಭಾರತ ವಿರುದ್ಧ ಇಟಲಿಗೆ ಮುನ್ನಡೆ

Update: 2019-02-01 17:43 GMT

ಕೋಲ್ಕತಾ, ಫೆ.1: ಹುಲ್ಲುಹಾಸಿನಲ್ಲಿ ಟೆನಿಸ್ ಆಡುವ ಆತಿಥೇಯ ಭಾರತದ ತಂತ್ರ ಮೊದಲ ದಿನ ಫಲ ನೀಡಿಲ್ಲ. ಕೋಲ್ಕತಾದ ಸೌತ್ ಕ್ಲಬ್‌ನಲ್ಲಿ ಶುಕ್ರವಾರ ಆರಂಭವಾದ ಡೇವಿಸ್‌ಕಪ್‌ನ ಅರ್ಹತಾ ಸುತ್ತಿನಲ್ಲಿ ಎರಡೂ ಸಿಂಗಲ್ಸ್ ಪಂದ್ಯಗಳನ್ನು ಗೆದ್ದುಕೊಂಡಿರುವ ಇಟಲಿ ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದೆ.

ಇಟಲಿಯ ಆ್ಯಂಡ್ರಿಯಸ್ ಸೆಪ್ಪಿ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ರಾಮ್‌ಕುಮಾರ್ ರಾಮನಾಥನ್‌ರನ್ನು 6-4, 6-2 ನೇರ ಸೆಟ್‌ಗಳಿಂದ ಸೋಲಿಸಿ ಇಟಲಿಗೆ 1-0 ಮುನ್ನಡೆ ಒದಗಿಸಿದರು. ಒಂದು ಗಂಟೆ ಹಾಗೂ 11 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ನಂ.37ನೇ ಆಟಗಾರ ಸೆಪ್ಪಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ನೇರ ಸೆಟ್‌ಗಳಿಂದ ಜಯ ದಾಖಲಿಸಿದರು. ಚೆನ್ನೈ ಆಟಗಾರ ರಾಮ್‌ಕುಮಾರ್ ಮೊದಲ ಸೆಟ್‌ನಲ್ಲಿ ಎರಡು ಬ್ರೇಕ್ ಪಾಯಿಂಟ್‌ನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು. ಸತತ 5 ಅಂಕ ಗಳಿಸಿದ ಇಟಲಿ ಆಟಗಾರ ಮೊದಲ ಸೆಟನ್ನು 41 ನಿಮಿಷಗಳಲ್ಲಿ ವಶಪಡಿಸಿಕೊಂಡರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ 22ರ ಹರೆಯದ ಮಾಟೆಯೊ ಬೆರೆಟ್ಟಿನಿ ಭಾರತದ ನಂ.1 ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ವಿರುದ್ಧ 6-4, 6-3 ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ. ಈ ಗೆಲುವಿನ ಮೂಲಕ ಇಟಲಿ ತಂಡಕ್ಕೆ 2-0 ಮುನ್ನಡೆ ದಾಖಲಿಸಲು ನೆರವಾಗಿದ್ದಾರೆ.

ಭಾರತ 0-2 ಹಿನ್ನಡೆ ಅನುಭವಿಸಿರುವ ಹಿನ್ನೆಲೆಯಲ್ಲಿ ಶನಿವಾರ ಭಾರತದ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಮಾಡು-ಮಡಿ ಪಂದ್ಯವನ್ನಾಡಲಿದ್ದಾರೆ.

ಇಟಲಿ ಪರ ಅಗ್ರ ರ್ಯಾಂಕಿನ ಸಿಂಗಲ್ಸ್ ಆಟಗಾರ ಮಾರ್ಕೊ ಸೆಚಿನಾಟೊ ಹಾಗೂ ಸೈಮನ್ ಬೊಲೆಲ್ಲಿ ಡಬಲ್ಸ್ ಪಂದ್ಯ ಆಡಲಿದ್ದಾರೆ. ಈ ಜೋಡಿ 2015ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿತ್ತು.

‘‘ನಮ್ಮ ಗಮನ ನಾಳೆಯ ಪಂದ್ಯದ ಮೇಲಿದೆ. ನಮ್ಮ ಕೈಯ್ಯಲ್ಲಿ ಕಠಿಣ ಸವಾಲಿದೆ ಎಂಬ ಅರಿವಿದೆ. ನಮಗೆ ಸಮಯದ ಕೊರತೆಯೂ ಇದೆ’’ ಎಂದು ಮೊದಲ ದಿನ ಭಾರತದ ನೀರಸ ಪ್ರದರ್ಶನದ ಬಳಿಕ ಆಟವಾಡದ ನಾಯಕ ಮಹೇಶ್ ಭೂಪತಿ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ವರ್ಷ ಏಶ್ಯ-ಒಸಿಯಾನಿಯಾ ಗ್ರೂಪ್-1 ಪಂದ್ಯದಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಿಸಿದ್ದ ಭಾರತ ತಂಡ ಅಂತಿಮವಾಗಿ ಚೀನಾವನ್ನು 3-2 ಅಂತರದಿಂದ ರೋಚಕವಾಗಿ ಮಣಿಸಿತ್ತು. ಭೂಪತಿ ಆ ಪಂದ್ಯದಿಂದ ಸ್ಫೂರ್ತಿ ಪಡೆಯಲು ಬಯಸಿದ್ದಾರೆ. ‘‘ದೇಶದ ಪರ ಆಡುವಾಗ ಒತ್ತಡವಿರುವುದು ಸಹಜ. ಕೆಲವೊಮ್ಮೆ ವಿಚಿತ್ರ ಘಟನೆಗಳು ನಡೆಯುತ್ತವೆ. ಚೀನಾದಲ್ಲಿ ನಮಗೆ ಇಂತಹ ಅನುಭವವಾಗಿದೆ. ಇಟಲಿ ತಂಡ ಚೀನಾಗಿಂತ ಬಲಿಷ್ಠವಾಗಿದೆ ಎಂದು ನನಗೆ ಗೊತ್ತು. ಆದರೆ, ಇದೀಗ ನಾವು ಒಂದೇ ನಿರ್ದಿಷ್ಟ ಪಂದ್ಯದತ್ತ ಹೆಚ್ಚು ಗಮನ ನೀಡಬೇಕಾಗಿದೆ’’ ಎಂದು ಭೂಪತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News