ಮ್ಯಾಡ್ರಿಡ್ ಸೆಮಿ ಫೈನಲ್ಗೆ ಲಗ್ಗೆ: ಕರೀಮ್ ಬೆಂಝೆಮ ಅವಳಿ ಗೋಲು
ಗಿರೊನ, ಫೆ.1: ಫಾರ್ವರ್ಡ್ ಆಟಗಾರ ಕರೀಮ್ ಬೆಂಝೆಮ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಯುರೋಪಿಯನ್ ಚಾಂಪಿಯನ್ ರಿಯಲ್ ಮ್ಯಾಡ್ರಿಡ್ ತಂಡ ಸ್ಪಾನೀಶ್ ಕೊಪಾ ಡೆಲ್ ರೇ ಫುಟ್ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಇಲ್ಲಿನ ಮೊಂಟಿಲಿವಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮ್ಯಾಡ್ರಿಡ್ ತಂಡ ಆತಿಥೇಯ ಗಿರೊನ ತಂಡವನ್ನು 3-1 ಅಂತರದಿಂದ ಮಣಿಸಿತು. 7-3 ಗೋಲುಗಳ ಸರಾಸರಿ ಆಧಾರದಲ್ಲಿ ಸೆಮಿ ಫೈನಲ್‌ಗೆ ಸ್ಥಾನ ಗಿಟ್ಟಿಸಿಕೊಂಡಿದೆ. ಕಳೆದ ವಾರ ಸ್ಯಾಂಟಿ ಯಾಗೊದಲ್ಲಿ ನಡೆದ ಮೊದಲ ಹಂತದ ಪಂದ್ಯದಲ್ಲಿ ತಂಡಕ್ಕೆ 4-2 ಅಂತರದ ಗೆಲುವಿಗೆ ನೆರವಾಗಿದ್ದ ಬೆಂಝೆಮ ಮೊದಲಾರ್ಧದ 27ನೇ ಹಾಗೂ 43ನೇ ನಿಮಿಷದಲ್ಲಿ ಅವಳಿ ಗೋಲು ಗಳಿಸಿ ತಂಡದ ಗೆಲುವಿಗೆ ಭದ್ರಬುನಾದಿ ಹಾಕಿದರು. ಪೆಡ್ರೊ ಪೊರ್ರೊ 71ನೇ ನಿಮಿಷದಲ್ಲಿ ಗಿರೊನ ಪರ ಸಮಾಧಾನಕರ ಗೋಲು ಗಳಿಸಿದರು. 76ನೇ ನಿಮಿಷದಲ್ಲಿ ಗೋಲು ಗಳಿಸಿದ ಮಾರ್ಕಸ್ ಲೊರೆಂಟಿ ಮ್ಯಾಡ್ರಿಡ್‌ಗೆ 3-1 ಅಂತರದ ಗೆಲುವು ತಂದರು. 7-3 ಗೋಲು ಸರಾಸರಿಯಲ್ಲಿ ಅಂತಿಮ-4ರ ಹಂತ ತಲುಪಲು ನೆರವಾದರು.
2014ರ ಬಳಿಕ ಮೊದಲ ಬಾರಿ ಕೊಪಾ ಕಿರೀಟದ ಮೇಲೆ ಕಣ್ಣಿಟ್ಟಿರುವ ಮ್ಯಾಡ್ರಿಡ್ ತಂಡ, ಈಗಾಗಲೇ ಸೆಮಿ ಫೈನಲ್‌ಗೆ ತಲುಪಿರುವ ಬಾರ್ಸಿಲೋನ, ರಿಯಲ್ ಬೆಟಿಸ್ ಹಾಗೂ ವೆಲೆನ್ಸಿಯಾ ತಂಡಗಳನ್ನು ಸೇರಿಕೊಂಡಿದೆ. ಬಾರ್ಸಿಲೋನ ಸತತ ಐದನೇ ಕಪ್ ಮೇಲೆ ಕಣ್ಣಿಟ್ಟಿದೆ. ಸ್ಯಾಂಟಿಯಾಗೊ ಸೊಲಾರಿ ಕೋಚಿಂಗ್‌ನಲ್ಲಿ ಪಳಗಿರುವ ಮ್ಯಾಡ್ರಿಡ್ ತಂಡ ಕಳೆದ 7 ಪಂದ್ಯಗಳಲ್ಲಿ 6ರಲ್ಲಿ ಜಯ ದಾಖಲಿಸಿದೆ. ಚಾಂಪಿಯನ್ಸ್ ಟ್ರೋಫಿ ಹತ್ತಿರವಿರುವಾಗ ತಂಡದ ಈ ಪ್ರದರ್ಶನ ಉತ್ತೇಜನಕಾರಿ ಅಂಶವಾಗಿದೆ.
ಫ್ರಾನ್ಸ್‌ನ ಫಾರ್ವರ್ಡ್ ಆಟಗಾರ ಬೆಂಝೆಮ ಮೂರು ಪಂದ್ಯಗಳಲ್ಲಿ ಐದು ಗೋಲುಗಳನ್ನು ಗಳಿಸಿ ಮ್ಯಾಡ್ರಿಡ್ ತಂಡದ ಯಶಸ್ವಿ ಪ್ರದರ್ಶನಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. 2009ರಲ್ಲಿ ಮ್ಯಾಡ್ರಿಡ್ ಕ್ಲಬ್ ಸೇರ್ಪಡೆಯಾಗಿರುವ ಬೆಂಝೆಮ 446 ಪಂದ್ಯಗಳಲ್ಲಿ ಒಟ್ಟು 209 ಗೋಲುಗಳನ್ನು ಗಳಿಸಿದ್ದಾರೆ. ಮೆಕ್ಸಿಕೊದ ಹ್ಯುಗೊ ಸ್ಯಾಂಚೆಝ್‌ರನ್ನು ಹಿಂದಿಕ್ಕಿ ಸಾರ್ವಕಾಲಿಕ ಅಗ್ರ ಸ್ಕೋರರ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.
ಸೆಮಿ ಫೈನಲ್‌ನಲ್ಲಿ ಮ್ಯಾಡ್ರಿಡ್‌ಗೆ ಬಾರ್ಸಿಲೋನ ಎದುರಾಳಿ
ಸ್ಪಾನಿಶ್ ಕೊಪಾ ಡೆಲ್ ರೆ ಫುಟ್ಬಾಲ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಸ್ಪೇನ್‌ನ ಎರಡು ಬಲಿಷ್ಠ ಫುಟ್ಬಾಲ್ ಕ್ಲಬ್‌ಗಳಾದ ಬಾರ್ಸಿಲೋನ ಹಾಗೂ ರಿಯಲ್ ಮ್ಯಾಡ್ರಿಡ್ ಸೆಣಸಾಡಲಿವೆ.
ಮತ್ತೊಂದು ಸೆಮಿ ಫೈನಲ್‌ನಲ್ಲಿ ರಿಯಲ್ ಬೆಟಿಸ್ ತಂಡ ವೆಲೆನ್ಸಿಯಾ ತಂಡವನ್ನು ಎದುರಿಸಲಿದೆ.
ಬಾರ್ಸಿಲೋನ-ಮ್ಯಾಡ್ರಿಡ್ ಕ್ಲಬ್‌ಗಳು ನಾಲ್ಕು ವಾರದಲ್ಲಿ ಮೂರನೇ ಬಾರಿ ಮುಖಾಮುಖಿಯಾಗುತ್ತಿವೆ. ಮಾ.2ರಂದು ಮ್ಯಾಡ್ರಿಡ್ ತಂಡ ಬಾರ್ಸಿಲೋನ ವಿರುದ್ಧ ಲಾಲಿಗ ಪಂದ್ಯವನ್ನು ಆಡಲಿದೆ.
30 ಬಾರಿಯ ಚಾಂಪಿಯನ್ ಬಾರ್ಸಿಲೋನ ಕಳೆದ ನಾಲ್ಕು ಆವೃತ್ತಿಯ ಟೂರ್ನಿಯಲ್ಲಿ ಜಯಶಾಲಿಯಾಗಿದೆ. ಫೆ.6 ರಂದು ಮೊದಲ ಹಂತ ಹಾಗೂ ಫೆ.27 ರಿಂದ ಎರಡನೇ ಹಂತದ ಪಂದ್ಯಗಳು ನಡೆಯಲಿವೆ.
ಬೆಟಿಸ್ ತಂಡ ತನ್ನ ತವರು ಮೈದಾನದಲ್ಲಿ ವೆಲೆನ್ಸಿಯಾ ವಿರುದ್ಧ ಮೊದಲ ಹಂತದ ಪಂದ್ಯವನ್ನ್ನೂ ಮೆಸ್ಟಲ್ಲಾದಲ್ಲಿ ಎರಡನೇ ಹಂತದ ಪಂದ್ಯವನ್ನು ಆಡಲಿದೆ.
ಫೈನಲ್ ಪಂದ್ಯ ಮೇ 25 ರಂದು ಸೆವಿಲ್ಲಾದಲ್ಲಿ ನಡೆಯಲಿದೆ.