×
Ad

30 ವರ್ಷಗಳ ಹಿಂದಿನ ದಾಖಲೆ ಮುರಿದ ಬರ್ನ್ಸ್-ಟ್ರಾವಿಸ್ ಜೋಡಿ

Update: 2019-02-01 23:18 IST

ಕ್ಯಾನ್‌ಬೆರಾ, ಫೆ.1: ಶ್ರೀಲಂಕಾ ವಿರುದ್ಧ ಇಲ್ಲಿ ಆರಂಭವಾಗಿರುವ ಎರಡನೇ ಟೆಸ್ಟ್‌ನಪ್ರಥಮ ಇನಿಂಗ್ಸ್‌ನ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯ ತಂಡ 4 ವಿಕೆಟ್ ಕಳೆದುಕೊಂಡು 384 ರನ್ ಗಳಿಸಿದೆ. ಆಸೀಸ್‌ನ ಟ್ರಾವಿಸ್ ಹೆಡ್(161) ಹಾಗೂ ಜೊ ಬರ್ನ್ಸ್(ಅಜೇಯ 172) ವೈಯಕ್ತಿಕ ಶತಕಗಳ ಮೂಲಕ ತಂಡ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಂಡಿದ್ದಾರೆ.

ಇಲ್ಲಿಯ ಮನುಕಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಈ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 306 ರನ್‌ಗಳನ್ನು ದಾಖಲಿಸಿತು. ಶ್ರೀಲಂಕಾ ವಿರುದ್ಧ ಆಸೀಸ್ ತಂಡದ ಜೋಡಿಯೊಂದು ದಾಖಲಿಸಿದ ಅತ್ಯಂತ ಗರಿಷ್ಠ ರನ್ ಜೊತೆಯಾಟ ಇದಾಗಿದೆ. 1989ರ ಡಿಸೆಂಬರ್‌ನಲ್ಲಿ ಹೋಬರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಡೀನ್ ಜೋನ್ಸ್ ಹಾಗೂ ಸ್ಟೀವ್ ವಾ ಜೋಡಿಯ ಮಧ್ಯೆ ಮುರಿಯದ ಜೊತೆಯಾಟದಲ್ಲಿ 260 ರನ್ ಹರಿದುಬಂದಿತ್ತು.

ಟೆಸ್ಟ್ ಪಂದ್ಯದಲ್ಲಿ ಡಿ.2017ರ ನಂತರ 300 ಅಥವಾ ಅದಕ್ಕಿಂತ ಅಧಿಕ ರನ್ ಗಳಿಸಿದ ಆಸ್ಟ್ರೇಲಿಯ ಜೋಡಿ ಇದಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಕಾಂಗರೂಪಡೆಯ ನಾಯಕ ಟಿಮ್ ಪೇನ್ ತಮ್ಮ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ದಿನದಾಟ ಕೊನೆಗೊಂಡಾಗ ಆಸೀಸ್ 384 ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಬರ್ನ್ಸ್ ಹಾಗೂ ಕುರ್ಟಿಸ್ ಪ್ಯಾಟರ್ಸನ್(25) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಶ್ರೀಲಂಕಾದ ವಿಶ್ವ ಫೆರ್ನಾಂಡೊ 99 ರನ್‌ಗೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News