ಬಜೆಟ್ ಅನುದಾನ : ವಿಜ್ಞಾನ ಇಲಾಖೆಗಳಿಗೆ ಕನಿಷ್ಟ ಹೆಚ್ಚಳ

Update: 2019-02-01 17:54 GMT

ಹೊಸದಿಲ್ಲಿ, ಫೆ.1: 2019-20ರ ಮಧ್ಯಂತರ ಬಜೆಟ್‌ನಲ್ಲಿ ಎರಡು ವಿಜ್ಞಾನ ಸಚಿವಾಲಯಗಳಿಗೆ ಒಟ್ಟು 14,697 ಕೋಟಿ ರೂ. ಅನುದಾನ ಒದಗಿಸಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕನಿಷ್ಟ ಹೆಚ್ಚಳವಾಗಿದೆ.

ಭಾರತೀಯ ಹವಾಮಾನಶಾಸ್ತ್ರ ಇಲಾಖೆಯಂತಹ ಪ್ರಮುಖ ಸಂಸ್ಥೆಗಳನ್ನು ಹೊಂದಿರುವ ಭೂವಿಜ್ಞಾನ ಇಲಾಖೆಗೆ 1,901 ಕೋಟಿ ರೂ. ಅನುದಾನ ಒದಗಿಸಲಾಗಿದೆ. 2017-18ರ ಸಾಲಿನಲ್ಲಿ ಈ ಇಲಾಖೆಗೆ 1,541 ಕೋಟಿ ರೂ, 2018-19ರ ಸಾಲಿನಲ್ಲಿ 1,800 ಕೋಟಿ ರೂ. ಒದಗಿಸಲಾಗಿತ್ತು.

 ಹೊಸ ರೇಡಾರ್‌ಗಳ ಸ್ಥಾಪನೆ, ಸ್ವಯಂಚಾಲಿತ ಹವಾಮಾನ ಕೇಂದ್ರಗಳ ಸ್ಥಾಪನೆ, ವಾತಾವರಣದ ಪ್ರಯೋಗ ನಡೆಸುವುದು, ಆಳ ಸಮುದ್ರದಲ್ಲಿ ಗಣಿಗಾರಿಕೆ ಸಂಶೋಧನೆಗೆ ಸಬ್‌ಮರ್ಸಿಬಲ್ ನೌಕೆಯ ಖರೀದಿ ಮುಂತಾದ ವೆಚ್ಚಗಳಿಗೆ ಈ ಅನುದಾನವನ್ನು ಬಳಸಲಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ 12,796 ಕೋಟಿ ರೂ. ಒದಗಿಸಲಾಗಿದ್ದು ಈ ಇಲಾಖೆಯಡಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಬಯೊಟೆಕ್ನಾಲಜಿ ವಿಭಾಗ (ಡಿಬಿಟಿ) ಮತ್ತು ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್‌ಐಆರ್) ಎಂಬ ಮೂರು ಮೂರು ವಿಭಾಗಗಳಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ 5,321 ಕೋಟಿ ರೂ. ಒದಗಿಸಲಾಗಿದ್ದು ಇದು 2018-19ರ ಸಾಲಿಗಿಂತ 207 ಕೋಟಿ ರೂ. ಅಧಿಕವಾಗಿದೆ. ಪ್ರತೀ ವಿಭಾಗದಲ್ಲೂ ತಜ್ಞರಿದ್ದು ಸುಮಾರು 70ಕ್ಕೂ ಹೆಚ್ಚು ಸಂಸ್ಥೆಗಳ ಮೂಲಕ ಇವರು ಸಂಶೋಧನಾ ಕಾರ್ಯ ನಡೆಸುತ್ತಾರೆ. ಡಿಬಿಟಿಗೆ 2,580 ಕೋಟಿ ರೂ.ಒದಗಿಸಲಾಗಿದ್ದು ಇದು ಕಳೆದ ವರ್ಷಕ್ಕಿಂತ 169 ಕೋಟಿ ರೂ. ಅಧಿಕವಾಗಿದೆ. ಸಿಎಸ್‌ಐಆರ್‌ಗೆ 4,895 ಕೋಟಿ ರೂ.ಒದಗಿಸಲಾಗಿದ್ದು ಇದು ಕಳೆದ ವರ್ಷಕ್ಕಿಂತ 4,572 ಕೋಟಿ ರೂ. ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News