ದೇಶದ ಅತೀ ದೊಡ್ಡ ಬ್ಯಾಂಕ್ ವಿಲೀನ ಸರಿಯಲ್ಲ: ರಮಾನಾಥ ರೈ

Update: 2019-02-02 17:44 GMT

ಮುಲ್ಕಿ, ಫೆ. 2: ಕರಾವಳಿಯ ಜೀವನಾಡಿಯಾಗಿರುವ ವಿಜಯಾ ಬ್ಯಾಂಕ್ ಉಳಿಸಲು ಉಗ್ರ ರೀತಿಯ ಹೋರಾಟದ ಅಗತ್ಯವಿದೆ. ಭಾರತ ದೇಶದಲ್ಲಿರುವ ಅತೀ ದೊಡ್ಡ ಬ್ಯಾಂಕ್ ವಿಲೀನ ಸರಿಯಲ್ಲ, ವಿಜಯಾ ಬ್ಯಾಂಕ್ ಅಸ್ತಿತ್ವ ಉಳಿಸುವ ನಿರ್ಣಾಯಕ ಹೋರಾಟಕ್ಕೆ ರಾಜಕೀಯ ಜತೆಗೂಡಬೇಕೆಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಮುಲ್ಕಿಯ ಗಾಂಧಿ ಮೈದಾನದ ಬೃಹತ್ ವೇದಿಕೆಯಲ್ಲಿ ವಿಜಯಾ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡಾದ ಜತೆಗೆ ವಿಲೀನಗೊಳಿಸಿರುವುದನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಇದೊಂದು ಬ್ಯಾಂಕ್ ಲೂಟಿಯ ಷಡ್ಯಂತ್ರ. ಕರಾವಳಿ ಜನತೆಗೆ ಮಾಡಿದ ದ್ರೋಹ. ತುಳುನಾಡಿನ ಹರಿಕಾರ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರಿಗೆ ಮಸಿ ಬಳಿಯುವ ತಂತ್ರ ಇದಾಗಿದೆ. ಇದರ ವಿರುದ್ಧ ಸತತ ಹೋರಾಟದ ಅಗತ್ಯವಿದೆ ಎಂದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಬಡವರ ಏಳಿಗೆಗಾಗಿ ಹುಟ್ಟಿಕೊಂಡ ಬ್ಯಾಂಕ್‍ನ್ನು ಉಳಿಸಲೇಬೇಕು. ಬ್ಯಾಂಕ್ ವಿಲೀನವಾದಲ್ಲಿ ನಾಳೆ ಮುಲ್ಕಿ ಸುಂದರರಾಮ್ ಶೆಟ್ಟರ ಭಾವಚಿತ್ರಕ್ಕೂ ಸಂಚಕಾರ ಬರಲಿದೆ. ಇದೊಂದು ಅವರ ಹೆಸರಿಗೆ ಕಳಂಕ ತರುವ ಯತ್ನ. ವಿಲೀನವಾದ ಬಳಿಕ ವಿಜಯಾ ಬ್ಯಾಂಕ್ ಹೆಸರನ್ನೇ ಬ್ಯಾಂಕ್‍ಗೆ ಇಡಬೇಕೆಂದು ಆಗ್ರಹಿಸಿದರು.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮಾತನಾಡಿ, ಪ್ರತಿಭಟನೆಯಿಂದ ವಿಲೀನ ಪ್ರಕ್ರಿಯೆ ನಿಲ್ಲದು. ಇಲ್ಲಿ ಸೇರಿದಷ್ಟು ಜನರನ್ನು ಕರೆದುಕೊಂಡು ದೆಹಲಿಗೆ ತೆರಳಿ ಹೋರಾಟ ನಡೆಸಬೇಕೆಂದರು.

ಹರಿಕೃಷ್ಣ ಪುನರೂರು, ಮಾಜಿ ರಾಜ್ಯಸಭಾ ಸದಸ್ಯ ಹಾಗೂ ವಿಜಯಾ ಬ್ಯಾಂಕ್ ನಿರ್ದೇಶಕ ಬಿ.ಇಬ್ರಾಹಿಮ್,ಕರ್ನಿರೆ ವಿಶ್ವನಾಥ್ ಶೆಟ್ಟಿ, ಪ್ರದೀಪ್‍ಕುಮಾರ್ ಕಲ್ಕೂರ, ಟಿಆರ್ ಭಟ್, ಎಮ್.ಬಿ. ಸದಾಶಿವ ಮತ್ತಿತರರು ಅಭಿಪ್ರಾಯ ಮಂಡಿಸಿದರು. 

ಮೆರವಣಿಗೆ: ಇದಕ್ಕೆ ಮುನ್ನ ಬಪ್ಪನಾಡು ದೇವಳ ಬಳಿ ಇರುವ ಮುಲ್ಕಿ ಸುಂದರರಾಮ್ ಶೆಟ್ಟಿ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆ ಮೂಲಕ ಕಾರ್ನಾಡು ಗಾಂಧಿ ಮೈದಾನಕ್ಕೆ ಪ್ರತಿಭಟನಾಕಾರರು ಆಗಮಿಸಿದರು.

ದಾರಿ ಮಧ್ಯೆ ವಿಜಯಾ ಬ್ಯಾಂಕ್ ಬಳಿ ಮುಲ್ಕಿ ಸುಂದರರಾಮ್ ಶೆಟ್ಟಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅನಂತಪದ್ಮನಾಭ ಅಸ್ರಣ್ಣ, ಶ್ರೀಪತಿ ಉಪಾಧ್ಯಾಯ, ದುಗ್ಗಣ್ಣ ಸಾವಂತರು, ಎನ್‍ಎಸ್ ಮನೋಹರ ಶೆಟ್ಟಿ, ಸುನಿಲ್ ಆಳ್ವ, ಹರೀಶ್ ಎನ್.ಪುತ್ರನ್, ಕೆ.ಆಶ್ರಫ್,ಮಿಥುನ್ ರೈ, ಜಯಕರ ಶೆಟ್ಟಿ ಇಂದ್ರಾಳಿ, ಜೀವನ್ ಕೆ.ಶೆಟ್ಟಿ, ಶಾಲೆಟ್ ಪಿಂಟೋ, ಧನಂಜಯ ಮಟ್ಟು, ಪ್ರತಿಭಾ ಕುಳಾಯಿ, ದೇವಪ್ರಸಾದ ಪುನರೂರು, ಲೀಲಾಧರ ಶೆಟ್ಟಿ ಕರಂದಾಡಿ, ಬಾಲಾಜಿ ಯೋಗೀಶ್ ಶೆಟ್ಟಿ, ಮಧು ಆಚಾರ್ಯ, ಪುತ್ತುಬಾವ, ಡಾ.ಹರಿಶ್ಚಂದ್ರ ಸಾಲ್ಯಾನ್, ಪ್ರೇಮನಾಥ ಆಳ್ವ, ಜಿ .ಶಿವರಾಮ ಆಳ್ವ, ಶ್ರೀಧರ ಶೆಟ್ಟಿ, ಪ್ರಕಾಶ್ ರಾವ್, ಜನಾರ್ಧನ ತೋನ್ಸೆ, ರಾಮಗಣೇಶ್, ಸುಶೀಲ್ ನರೋನ್ಹಾ, ವಸಂತ ಶೆಟ್ಟಿ, ಅಜಿತ್ ಶೆಟ್ಟಿ, ಗುರುವಪ್ಪ ಕೋಟ್ಯಾನ್, ಗೋಪಿನಾಥ ಪಡಂಗ, ಡಾ.ಅಚ್ಯುತ ಕುಡ್ವ, ಇಕ್ಬಾಲ್ ಅಹಮದ್, ಸುಮತಿ ಹೆಗ್ಡೆ, ಬೇಬಿ ಕುಂದರ್, ಎ.ಡಿ.ಪೂಂಜಾ, ಮುನೀರ್, ಅಬ್ದುಲ್ ರಝಾಕ್, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಪ್ರವೀಣ್ ಪಕ್ಷಿಕೆರೆ, ಹರ್ಷರಾಜ ಶೆಟ್ಟಿ, ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News