ಫಲ್ಗುಣಿ ನದಿ ತೀರದಲ್ಲಿ ಅಕ್ರಮ ಮರಳು ದಂಧೆ: 42 ದೋಣಿಗಳು, ಟಿಪ್ಪರ್, ಡೋಜರ್, ಮರಳು ರಾಶಿ ವಶಕ್ಕೆ

Update: 2019-02-02 17:45 GMT

ಮಂಗಳೂರು, ಫೆ. 2: ಫಲ್ಗುಣಿ ನದಿ ತೀರದಲ್ಲಿ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಮರಳು ದಂಧೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ನಗರ ಪೊಲೀಸರು, ಮರಳು ತೆಗೆಯಲು ಉಪಯೇಗಿಸುವ ದೋಣಿಗಳು, ಟಿಪ್ಪರ್ ಲಾರಿಗಳು ಸಹಿತ ಮರಳು ರಾಶಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಉಳಾಯಿಬೆಟ್ಟು ನಿವಾಸಿ ರವಿರಾಜ (45), ವಿನಯ್ ಶೆಟ್ಟಿ, ಹಾಗೂ ಯಶವಂತ ಆಳ್ವ, ಯೂಸುಫ್ ಉಳಾಯಿಬೆಟ್ಟು, ಇಸಾಕ್ ಉಳಾಯಿಬೆಟ್ಟು, ಅಸನ್ ಉಳಾಯಿಬೆಟ್ಟು, ಶರೀಫ್ ಉಳಾಯಿಬೆಟ್ಟು ಬಂಧಿತ ಆರೋಪಿಗಳು.

ಫೆ.2ರಂದು ನದಿ ತೀರದಲ್ಲಿ ಅನಧಿಕೃತವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಮಂಗಳೂರು ದಕ್ಷಿಣ ಉಪವಿಭಾಗ, ಮಂಗಳೂರು ಗ್ರಾಮಾಂತರ ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ದಂಧೆ ಬಯಲಿಗೆಳೆದಿದ್ದಾರೆ.

ಸ್ಥಳದಲ್ಲಿ ಮರಳು ತೆಗೆಯಲು ಬಳಸುವ 42 ದೋಣಿಗಳು, ಐದು ಟಿಪ್ಪರ್ ಲಾರಿಗಳು, ಮೂರು ಡೋಜರ್‌ಗಳು ಮತ್ತು ದಕ್ಕೆಯಲ್ಲಿ ಅಲ್ಲಲ್ಲಿ ಸಂಗ್ರಹಿಸಿದ ಮರಳು ರಾಶಿಗಳನ್ನು ಪತ್ತೆ ಹಚ್ಚಲಾಗಿದ್ದು, ವಶಕ್ಕೆ ಪಡೆದ ಸೊತ್ತುಗಳ ವೌಲ್ಯ 1.20 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್‌ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಾಮರಾವ್, ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ಸಿದ್ದಗೌಡ ಎಚ್.ಭಜಂತ್ರಿ, ಪಿಎಸ್ಸೈ ವೆಂಕಟೇಶ್ ಐ., ಎಸ್ಸೈ ಹರೀಶ್ ಮತ್ತು ಸಿಬ್ಬಂದಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪದ್ಮಶ್ರೀ, ಅಧಿಕಾರಿ ಮೂರ್ತಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News