‘ಬ್ರೆಕ್ಸಿಟ್’ ಸಂಬಂಧಿ ಗಲಭೆ ನಡೆದರೆ ಎಲಿಝಬೆತ್ ಸ್ಥಳಾಂತರಕ್ಕೆ ತುರ್ತು ಯೋಜನೆ

Update: 2019-02-03 14:55 GMT

ಲಂಡನ್, ಜ. 3: ಮುಂದಿನ ತಿಂಗಳು ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಡುವ ಪ್ರಕ್ರಿಯೆ (ಬ್ರೆಕ್ಸಿಟ್) ಸರಾಗವಾಗಿ ನಡೆಯದೆ ಗಲಭೆಗಳು ನಡೆದ ಸಂದರ್ಭದಲ್ಲಿ, ರಾಜ ಕುಟುಂಬವನ್ನು ಸ್ಥಳಾಂತರಿಸುವುದಕ್ಕಾಗಿ ಶೀತಲ ಸಮರ ಕಾಲದ ತುರ್ತು ಯೋಜನೆಯೊಂದಕ್ಕೆ ಬ್ರಿಟಿಶ್ ಅಧಿಕಾರಿಗಳು ಮರುಜೀವ ನೀಡಿದ್ದಾರೆ ಎಂದು ಎರಡು ಪತ್ರಿಕೆಗಳು ವರದಿ ಮಾಡಿವೆ.

‘‘ಈ ತುರ್ತು ಸ್ಥಳಾಂತರ ಯೋಜನೆಗಳು ಶೀತಲ ಯುದ್ಧದ ಕಾಲದಿಂದಲೂ ಇವೆ. ಆದರೆ, ಯಾವುದೇ ಒಪ್ಪಂದವಿಲ್ಲದೆ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಬೇರ್ಪಡಬೇಕಾದ ಸಂದರ್ಭ (ನೋ-ಡೀಲ್ ಬ್ರೆಕ್ಸಿಟ್) ಎದುರಾದರೆ, ಅದನ್ನು ನಿಭಾಯಿಸುವುದಕ್ಕಾಗಿ ಈ ಯೋಜನೆಯ ಉದ್ದೇಶವನ್ನು ಬದಲಾಯಿಸಲಾಗಿದೆ’’ ಎಂದು ಸರಕಾರದ ಕ್ಯಾಬಿನೆಟ್ ಕಚೇರಿಯ ಮೂಲವೊಂದನ್ನು ಉಲ್ಲೇಖಿಸಿ ‘ಸಂಡೇ ಟೈಮ್ಸ್’ ವರದಿ ಮಾಡಿದೆ.

ಮಹಾರಾಣಿ ಸೇರಿದಂತೆ ರಾಜ ಕುಟುಂಬವನ್ನು ಲಂಡನ್‌ನಿಂದ ಹೊರಗಿನ ಸುರಕ್ಷಿತ ಸ್ಥಳವೊಂದಕ್ಕೆ ಸಾಗಿಸುವ ಯೋಜನೆಗಳ ಬಗ್ಗೆ ಕೇಳಿದ್ದೇನೆ ಎಂಬುದಾಗಿ ‘ದ ಮೇಲ್’ ಪತ್ರಿಕೆ ಹೇಳಿದೆ.

ಐರೋಪ್ಯ ಒಕ್ಕೂಟದೊಂದಿಗೆ ಮಾಡಿಕೊಂಡಿರುವ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನ ಅನುಮೋದನೆ ಪಡೆದುಕೊಳ್ಳಲು ಪ್ರಧಾನಿ ತೆರೇಸಾ ಮೇ ಸರಕಾರ ಹರಸಾಹಸ ಪಡುತ್ತಿದೆ. ಇದು ಮಾರ್ಚ್ 29ರ ಮೊದಲು ಪೂರ್ಣಗೊಳ್ಳಬೇಕಾಗಿದೆ.

ಒಂದು ವೇಳೆ, ಸಂಸತ್ತಿನ ಅನುಮೋದನೆ ಲಭಿಸದೆ ಹೋದರೆ, ಪರಿಸ್ಥಿತಿಯನ್ನು ಎದುರಿಸಲು ಸರಕಾರ ಮತ್ತು ಉದ್ಯಮಗಳು ತುರ್ತು ಯೋಜನೆಗಳನ್ನು ಸಿದ್ಧಪಡಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News