ಬೇಹುಗಾರಿಕೆ ಆರೋಪದಲ್ಲಿ ಬಂಧಿತ ಆಸ್ಟ್ರೇಲಿಯನ್ ಗೆ ವಕೀಲರ ಭೇಟಿ ನಿರಾಕರಿಸಿದ ಚೀನಾ
Update: 2019-02-03 20:53 IST
ಬೀಜಿಂಗ್, ಫೆ. 3: ಚೀನಾದಲ್ಲಿ ಬೇಹುಗಾರಿಕೆ ಆರೋಪದಲ್ಲಿ ಬಂಧಿತನಾಗಿರುವ ಆಸ್ಟ್ರೇಲಿಯದ ಪ್ರಜೆಯನ್ನು ಭೇಟಿಯಾಗಲು ಚೀನಾದ ಅಧಿಕಾರಿಗಳು ತಮಗೆ ಅವಕಾಶ ನೀಡಿಲ್ಲ ಎಂಬುದಾಗಿ ಬಂಧಿತನ ಪತ್ನಿ ನೇಮಿಸಿರುವ ಇಬ್ಬರು ವಕೀಲರು ಹೇಳಿದ್ದಾರೆ.
53 ವರ್ಷದ ಚೀನಾ ಸಂಜಾತ ಲೇಖಕ ಯಾಂಗ್ ಹೆಂಗ್‌ಜುನ್‌ರನ್ನು ಕಳೆದ ತಿಂಗಳು ಗ್ವಾಂಗ್ಝೂ ನಗರದಲ್ಲಿ ಬಂಧಿಸಲಾಗಿತ್ತು. ಅವರು ನ್ಯೂಯಾರ್ಕ್‌ನಿಂದ ಬಂದು ಶಾಂಘೈ ಹೋಗಲು ಕಾಯುತ್ತಿದ್ದಾಗ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ತನ್ನ ಕುಟುಂಬ ನೇಮಿಸಿರುವ ವಕೀಲರನ್ನು ಬಂಧಿತ ಯಾಂಗ್ ಸ್ವೀಕರಿಸಿಲ್ಲ ಎಂಬುದಾಗಿ ಸರಕಾರಿ ಭದ್ರತಾ ಬ್ಯೂರೋ ಶುಕ್ರವಾರ ನನಗೆ ತಿಳಿಸಿದೆ ಎಂದು ಓರ್ವ ವಕೀಲ ಮೊ ಶಾಒಪಿಂಗ್ ಹೇಳಿದ್ದಾರೆ.
‘‘ಇದು ಸ್ವತಃ ಯಾಂಗ್ ಹೆಗ್‌ಜುನ್‌ರ ಇಚ್ಛೆಯೇ ಎನ್ನುವ ಬಗ್ಗೆ ನಮಗೆ ಸಂದೇಹವಿದೆ’’ ಎಂದು ಇನ್ನೋರ್ವ ವಕೀಲ ಶಾಂಗ್ ಬವೊಜುನ್ ಹೇಳಿದರು.