ಸ್ವಂತ ಮನೆ, ಸಂಸಾರ ನೋಡಿಕೊಳ್ಳಲಾಗದ ವ್ಯಕ್ತಿ ದೇಶ ನಡೆಸಲಾರ

Update: 2019-02-03 15:37 GMT

ನಾಗ್ಪುರ,ಫೆ.3: ಪಕ್ಷದ ಕಾರ್ಯಕರ್ತರು ಮೊದಲು ತಮ್ಮ ಕೌಟುಂಬಿಕ ಹೊಣೆಗಾರಿಕೆಗಳನ್ನು ಪೂರೈಸಬೇಕು. ಏಕೆಂದರೆ ಈ ಕಾರ್ಯವನ್ನು ಮಾಡಲಾಗದವರು ದೇಶವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

ಇಲ್ಲಿ ಸಮಾವೇಶವೊಂದರಲ್ಲಿ ಎಬಿವಿಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದ ಗಡ್ಕರಿ,‘‘ಬಿಜೆಪಿಗಾಗಿ ಮತ್ತು ದೇಶಕ್ಕಾಗಿ ತಮ್ಮ ಬದುಕನ್ನು ಅರ್ಪಿಸಲು ಬಯಸಿರುವುದಾಗಿ ಹೇಳುವ ಅನೇಕ ಜನರನ್ನು ನಾನು ಭೇಟಿಯಾಗುತ್ತಿರುತ್ತೇನೆ. ನೀನು ಏನು ಕೆಲಸ ಮಾಡುತ್ತಿದ್ದೀಯಾ ಮತ್ತು ನಿನ್ನ ಕುಟುಂಬದಲ್ಲಿ ಯಾರೆಲ್ಲ ಇದ್ದಾರೆ ಎಂದು ಇಂತಹ ಓರ್ವ ವ್ಯಕ್ತಿಗೆ ನಾನು ಪ್ರಶ್ನಿಸಿದ್ದೆ. ಸರಿಯಾಗಿ ನಡೆಯದ್ದರಿಂದ ತನ್ನ ಅಂಗಡಿಯನ್ನು ಮುಚ್ಚಿದ್ದೇನೆ , ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಇದ್ದಾರೆ ಎಂದಾತ ಉತ್ತರಿಸಿದ್ದ. ಮೊದಲು ನಿನ್ನ ಮನೆಯ ಕಾಳಜಿಯನ್ನು ವಹಿಸು, ಏಕೆಂದರೆ ತನ್ನ ಮನೆಯನ್ನು ಸಂಭಾಳಿಸಲು ಸಾಧ್ಯವಾಗದ ವ್ಯಕ್ತಿ ದೇಶವನ್ನು ನಿರ್ವಹಿಸುವುದು ಸಾಧ್ಯವಿಲ್ಲ. ಹೀಗಾಗಿ ಮೊದಲು ನಿನ್ನ ಮನೆ ಮತ್ತು ಸಂಸಾರವನ್ನು ಸರಿಯಾಗಿ ನೋಡಿಕೋ,ಬಳಿಕ ಪಕ್ಷ ಮತ್ತು ದೇಶಕ್ಕಾಗಿ ಕೆಲಸ ಮಾಡು ಎಂದು ನಾನು ಆತನಿಗೆ ತಿಳಿಸಿದ್ದೆ’’ ಎಂದು ಹೇಳಿದರು.

ಜನತೆಗೆ ಕನಸುಗಳನ್ನು ಮಾರಾಟ ಮಾಡುವ ರಾಜಕೀಯ ನಾಯಕರು ಅವುಗಳನ್ನು ಸಾಕಾರಗೊಳಿಸುವಲ್ಲಿ ವಿಫಲರಾದಾಗ ಸಾರ್ವಜನಿಕರಿಂದ ‘ಪೆಟ್ಟು’ತಿನ್ನುತ್ತಾರೆ ಎಂದು ಗಡ್ಕರಿ ಇತ್ತೀಚಿಗಷ್ಟೇ ಹೇಳಿದ್ದರು. ಇದಕ್ಕೂ ಮುನ್ನ ಮಧ್ಯಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್‌ಗಡಗಳಲ್ಲಿ ಬಿಜೆಪಿಯ ಸೋಲಿನ ಹಿನ್ನೆಲೆಯಲ್ಲಿ, ನಾಯಕತ್ವವು ಸೋಲು ಮತ್ತು ವೈಫಲ್ಯಗಳ ಹೊಣೆಯನ್ನೂ ಹೊತ್ತುಕೊಳ್ಳಬೇಕು ಎಂದು ಹೇಳಿದ್ದರು. ತನ್ನ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಗಡ್ಕರಿ ಬಳಿಕ ಸಮಜಾಯಿಷಿಗಳನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News