×
Ad

ಈ 13 ವರ್ಷ ವಯಸ್ಸಿನ ಪೋರ ಯುಪಿಎಸ್‌ಪಿ ಪರೀಕ್ಷಾರ್ಥಿಗಳಿಗೆ ‘ಗುರು’

Update: 2019-02-03 21:08 IST

ಹೈದರಾಬಾದ್,ಫೆ.3: 13 ವರ್ಷ ವಯಸ್ಸಿನ ಬಾಲಕನೊಬ್ಬ, ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗಳಿಗೆ ಬರೆಯಲು ಸಿದ್ಧತೆ ನಡೆಸುವವರಿಗೆ ಶಿಕ್ಷಕನಾಗಿದ್ದಾನೆಂದರೆ ಯಾರಾದರೂ ಅಚ್ಚರಿ ಪಡಲೇಬೇಕು. ಹೌದು. ತೆಲಂಗಾಣದ ಮಂಚೇರಿಯಲ್ ಪಟ್ಟಣದ 13 ವರ್ಷದ ಬಾಲಕ ಅಮರ್ ಸ್ವಸ್ತಿಕ್ ಆಚಾರ್ಯ ತೊಗಿಟಿ ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ‘ಗುರು’ವಾಗಿದ್ದಾನೆ.

ಯುಪಿಎಸ್‌ಸಿ ಪರೀಕ್ಷಾರ್ಥಿಗಳಿಗಾಗಿ ಆತ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡುವ ವಿಡಿಯೋಗಳು ಭಾರೀ ಜನಪ್ರಿಯವಾಗಿದೆ. ಅಮರ್ ಸ್ವಸ್ತಿಕ್ 2016ರಲ್ಲಿ ತನ್ನ ಹತ್ತನೆ ವಯಸ್ಸಿನಲ್ಲಿ ಯೂಟ್ಯೂಬ್‌ನಲ್ಲಿ ಆರಂಭಿಸಿದ ‘ಲರ್ನ್ ವಿದ್ ಅಮರ್’ ಚಾನೆಲ್ ಭಾರೀ ಜನಪ್ರಿಯವಾಗಿದ್ದು, ಈಗ 1.87 ಲಕ್ಷಕ್ಕೂ ಅಧಿಕ ಸಬ್ ಸ್ಕ್ರೈಬರ್ಗಳನ್ನು ಹೊಂದಿದೆ.

ಅಮರ್ ಸ್ವಸ್ತಿಕ್‌ನ ತಂದೆ ಸರಕಾರಿ ಶಾಲೆಯೊಂದರ ಶಿಕ್ಷಕರಾಗಿದ್ದು, ಅವರು ತನ್ನ ಜಿಲ್ಲೆಯ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.ಅವರಿಂದ ತಾನು ಪರೀಕ್ಷಾ ತರಬೇತಿಗೆ ಸಂಬಂಧಿಸಿ ಬಹಳಷ್ಟು ಜ್ಞಾನ ವನ್ನು ಸಂಪಾದಿಸಿದ್ದಾಗಿ ಅಮರ್ ಸ್ವಸ್ತಿಕ್ ಹೇಳುತ್ತಾನೆ. ತಾನು ಐದನೆ ಕ್ಲಾಸ್‌ನಲ್ಲಿ ಕಲಿಯುತ್ತಿದ್ದಾಗ ಅಟ್ಲಾಸ್ (ಭೂಪಟ) ಜೊತೆ ಅಟವಾಡುತ್ತಿದ್ದುದನ್ನು ತನ್ನ ತಂದೆ ಗಮನಿಸಿದ್ದರು. ತನ್ನ ಆಸಕ್ತಿಯನ್ನು ಗಮನಿಸಿದ ಅವರು ತನಗೆ ಭೂಗೋಳವನ್ನು ಬೋಧಿಸಲು ಆರಂಭಿಸಿದರೆಂದು ಸ್ವಸ್ತಿಕ್ ಹೇಳುತ್ತಾನೆ. ಒಂದು ದಿನ ಅಮರ್ ತಾನಾಗಿಯೇ ಭೂಗೋಳ ಪಾಠವನ್ನು ಕಲಿಸುತ್ತಿರುವ ವಿಡಿಯೋವೊಂದನ್ನು, ಆತನ ತಾಯಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು.

ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಇದರಿಂದ ಸ್ಫೂರ್ತಿ ಪಡೆದ ಅಮರ್, ಯೂಟ್ಯೂಬ್‌ನಲ್ಲಿ ಭೂಗೋಳ ಬೋಧಿಸುವ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದಾನೆ. ಅಮರ್ ಇದೀಗ ಭೂಗೋಳ ಶಾಸ್ತ್ರದ ಜೊತೆಗೆ ಅರ್ಥಶಾಸ್ತ್ರ ಹಾಗೂ ರಾಜಕೀಯಶಾಸ್ತ್ರವನ್ನು ಬೋಧಿಸುವ ಯೋಜನೆಯನ್ನು ಕೂಡಾ ಹೊಂದಿದ್ದಾನೆ. ತಾನು ವಯಸ್ಕನಾದ ಬಳಿಕ ಯುಪಿಎಸ್‌ಸಿ ಪರೀಕ್ಷೆಗೆ ಬರೆಯುವ ಹಂಬಲ ಹೊಂದಿರುವ ಅಮರ್, ಐಎಎಸ್ ಅಧಿಕಾರಿಯಾಗಿ, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಹಂಬಲವನ್ನು ಹೊಂದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News