ಮೂತ್ರದ ಬಣ್ಣ ಕೆಂಪು,ಹಳದಿ ಅಥವಾ ಹಸಿರಾಗಿದೆಯೇ?: ಕಾರಣವಿಲ್ಲಿವೆ......

Update: 2019-02-03 17:13 GMT

ನಮ್ಮ ಮೂತ್ರದ ಬಣ್ಣ ನಮ್ಮ ಆರೋಗ್ಯವನ್ನು ಸೂಚಿಸುತ್ತದೆ. ಆದರೆ ನಾವು ಸೇವಿಸುವ ಹಲವಾರು ಆಹಾರಗಳು ಸಹ ಮೂತ್ರದ ಬಣ್ಣದಲ್ಲಿ ಬದಲಾವಣೆಗೆ ಕಾರಣವಾಗುತ್ತವೆ. ಹೀಗಾಗಿ ಎಲ್ಲ ಸಂದರ್ಭಗಳಲ್ಲಿಯೂ ಮೂತ್ರದ ಬಣ್ಣವು ನಿಮ್ಮ ಆರೋಗ್ಯದ ಮಾನದಂಡವಾಗಿರುತ್ತದೆ ಎಂದೇನಿಲ್ಲ.

ವಾಸ್ತವದಲ್ಲಿ ಮೂತ್ರವು ನಮ್ಮ ಆರೋಗ್ಯ ಸ್ಥಿತಿಯ ಪ್ರಮುಖ ಸೂಚಕವಾಗಿದೆ. ಅದು ಶರೀರದಲ್ಲಿಯ ವಿಷವಸ್ತುಗಳನ್ನು,ತ್ಯಾಜ್ಯಗಳನ್ನು ಹೊರಗೆ ಹಾಕುವಲ್ಲಿ ಮತ್ತು ಪಿಎಚ್ ಅನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಹೀಗಾಗಿ ಮೂತ್ರದ ಬಣ್ಣದಲ್ಲಿ ಬದಲಾವಣೆಗಳ ಬಗ್ಗೆ ನಿರಂತರ ನಿಗಾ ಅಗತ್ಯವಾಗಿರುತ್ತದೆ,ಏಕೆಂದರೆ ಅದು ಗಂಭೀರ ಅನಾರೋಗ್ಯವನ್ನು ಸೂಚಿಸಬಹುದು. ಕೆಲವು ಆಹಾರಗಳು,ಔಷಧಿಗಳು ಮತ್ತು ರೋಗಗಳು ಸೇರಿದಂತೆ ಹಲವಾರು ಅಂಶಗಳು ಮೂತ್ರದ ಬಣ್ಣ ಮತ್ತು ನೋಟದ ಮೆಲೆ ಪರಿಣಾಮವನ್ನುಂಟು ಮಾಡುತ್ತವೆ.

►ಫ್ಲೋರಸೆಂಟ್ ಹಳದಿ ಅಥವಾ ಕಿತ್ತಳೆ

ರಿಬೊಫ್ಲಾವಿನ್ ಎಂದೂ ಕರೆಯಲಾಗುವ ವಿಟಾಮಿನ್ ಬಿ12ನ್ನು ಬಿ ಕಾಂಪ್ಲೆಕ್ಸ್ ಪೂರಕಗಳ ಮೂಲಕ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ,ಹೆಚ್ಚುವರಿ ವಿಟಾಮಿನ್ ಮೂತ್ರದ ಮೂಲಕ ಹೊರಗೆ ಹೋಗುತ್ತದೆ ಮತ್ತು ಇದು ಮೂತ್ರಕ್ಕೆ ಫ್ಲೋರಸೆಂಟ್ ಹಳದಿ ಅಥವಾ ನಿಯಾನ್ ಹಳದಿ ಬಣ್ಣವನ್ನು ನೀಡುತ್ತದೆ.

ಕ್ಯಾರಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಮೂತ್ರವು ದಟ್ಟ ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ ಮತ್ತು ತ್ವಚೆಗೆ ಹಳದಿಯುಕ್ತ ಕಿತ್ತಳೆ ಬಣ್ಣದ ಛಾಯೆಯನ್ನು ನೀಡುತ್ತದೆ. ಈ ಸ್ಥಿತಿಯನ್ನು ಕ್ಯಾರೊಟೆನಿಮಿಯಾ ಎಂದು ಕರೆಯಲಾಗುತ್ತದೆ.

ಅಲ್ಲದೆ ಹೃದಯದ ಸಮಸ್ಯೆಗೆ ನೀಡಲಾಗುವ ಹೆಪ್ಪುರೋಧಕ ಔಷಧಿ ವಾರ್ಫರಿನ್ ಅಥವಾ ಕುಮಾಡಿನ್ ಮೂತ್ರಕ್ಕೆ ಕಿತ್ತಳೆ ಬಣ್ಣವನ್ನು ನೀಡಬಹುದು.

►ಗುಲಾಬಿ ಅಥವಾ ಕೆಂಪು ಬಣ್ಣ

ಬೀಟ್‌ರೂಟ್,ಬ್ಲಾಕ್‌ಬೆರಿಗಳನ್ನು ತಿನ್ನುತ್ತಿದ್ದರೆ ಅಥವಾ ಫಿನಾಲ್‌ಫ್ತಲೀನ್ ಅನ್ನು ಒಳಗೊಂಡಿರುವ ವಿರೇಚಕಗಳನ್ನು ಸೇವಿಸುತ್ತಿದ್ದರೆ ಅತಿಯಾದ ಕ್ಷಾರತೆಯಿಂದಾಗಿ ಮೂತ್ರವು ಗುಲಾಬಿ ಅಥವಾ ಕೆಂಪು ಬಣ್ಣದ್ದಾಗಿ ಕಂಡುಬರಬಹುದು.

ಕೆಂಪು ಬಣ್ಣದ ಮೂತ್ರವು ರಕ್ತಸ್ರಾವ ಮತ್ತು ಹಾನಿಗೊಂಡ ಸ್ನಾಯುಕೋಶಗಳಿಂದ ಬಿಡುಗಡೆಗೊಂಡ ಮಯೊಗ್ಲೋಬಿನ್‌ನ ಉಪಸ್ಥಿತಿಯನ್ನು ಸೂಚಿಸಬಹುದು. ಕೆಂಪು ಬಣ್ಣವು ಸ್ನಾಯುಗಳು,ಮೂತ್ರಕೋಶ ಮತ್ತು ಮೂತ್ರಪಿಂಡಗಳಿಗೆ ಹಾನಿಯನ್ನೂ ಸೂಚಿಸಬಹುದು. ಮೂತ್ರನಾಳದ ಸೋಂಕಿಗಾಗಿ ನೀಡಲಾಗುವ ಫೆನಾರೊಪೈರಿಡಿನ್‌ನಂತಹ ಕೆಲವು ಔಷಧಿಗಳೂ ಮೂತ್ರಕ್ಕೆ ಕೆಂಪು ಬಣ್ಣವನ್ನು ನೀಡುತ್ತವೆ. ಕೆಂಪು ಬಣ್ಣದ ಮೂತ್ರ ನರ ಅಥವಾ ಚರ್ಮದ ಸಮಸ್ಯೆಗಳನ್ನುಂಟು ಮಾಡುವ ಪಾರ್ಫಿರಿಯಾ ಎಂಬ ವೈದ್ಯಕೀಯ ಸ್ಥಿತಿಯನ್ನೂ ಸೂಚಿಸಬಹುದು.

►ನಸು ಹಸಿರು ಅಥವಾ ನೀಲಿ ಮೂತ್ರ

ನಸು ಹಸಿರು ಅಥವಾ ನೀಲಿ ಛಾಯೆಯ ಗುಲಾಬಿ ಮೂತ್ರವು ಎರುಗಿನೋಸಾ ಎಂಬ ಬ್ಯಾಕ್ಟೀರಿಯಾಗಳ ಸೋಂಕನ್ನು ಅಥವಾ ಶತಾವರಿಯ ಅತಿಯಾದ ಸೇವನೆಯನ್ನು ಸೂಚಿಸುತ್ತದೆ. ಅಲ್ಲದೆ ಚಯಾಪಚಯ ರೋಗಗಳೂ ಹಸಿರು ಅಥವಾ ನೀಲಿ ಮೂತ್ರಕ್ಕೆ ಕಾರಣವಾಗುತ್ತವೆ.

►ಕಂದು ಅಥವಾ ಕಪ್ಪು ಮೂತ್ರ

ವ್ಯಕ್ತಿಯು ಪ್ರಮುಖ ಅಮಿನೊ ಆ್ಯಸಿಡ್‌ಗಳನ್ನು ವಿಭಜಿಸಲು ಸಾಧ್ಯವಾಗದ ಅಲ್ಕಪ್ಟೊನುರಿಯಾ ಎಂಬ ವೈದ್ಯಕೀಯ ಸ್ಥಿತಿಯನ್ನು ಹೊಂದಿದ್ದಾಗ ಮೂತ್ರವು ಕಪ್ಪು ಅಥವಾ ಕಂದು ಬಣ್ಣದ್ದಾಗಿ ಕಂಡುಬರಬಹುದು. ಹೆಪಟೈಟಿಸ್ ಮತ್ತು ಸಿರೊಸಿಸ್‌ನಂತಹ ಯಕೃತ್ತಿನ ರೋಗಗಳು,ಕೆಲವು ಮೂತ್ರಪಿಂಡ ರೋಗಗಳು ಸಹ ಕಪ್ಪು ಬಣ್ಣದ ಮೂತ್ರಕ್ಕೆ ಕಾರಣವಾಗುತ್ತವೆ. ಅಲ್ಲದೆ ಕಪ್ಪು ಮೂತ್ರವು ಕೆಲವು ವಿಧಗಳ ಕ್ಯಾನ್ಸರ್‌ನ್ನೂ ಸೂಚಿಸಬಹುದು.

►ಮೋಡದ ಬಣ್ಣ

ಹಲವರಲ್ಲಿ ಮೋಡದ ಬಣ್ಣ ಅಥವಾ ತಿಳಿಹಾಲಿನಂತಹ ಬಣ್ಣದ ಮೂತ್ರವು ವಿಸರ್ಜನೆಯಾಗುತ್ತದೆ ಮತ್ತು ಸಾಮಾನ್ಯವಾಗಿ ಇದನ್ನು ಕಡೆಗಣಿಸುತ್ತಾರೆ. ಆದರೆ ಮೂತ್ರವು ಮೋಡದ ಬಣ್ಣದಿಂದ ಕೂಡಿದ್ದರೆ ಅದು ಮೂತ್ರನಾಳ ಸೋಂಕು,ಪ್ರೋಟಿನುರಿಯಾ,ಮೂತ್ರಪಿಂಡ ಹಾನಿ,ಮಧುಮೇಹ,ಅಧಿಕ ರಕ್ತದೊತ್ತಡ ಇತ್ಯಾದಿ ಹಲವಾರು ಕಾಯಿಲೆಗಳನ್ನು ಸೂಚಿಸಬಹುದು. ಹೀಗೆ ಮೂತ್ರದ ಬಣ್ಣವು ವಿವಿಧ ಕಾಯಿಲೆಗಳನ್ನು ಸೂಚಿಸಬಹುದು ಮತ್ತು ಸೂಕ್ತ ಕಾಳಜಿ ವಹಿಸಿದರೆ ಇಂತಹ ಕಾಯಿಲೆಗಳನ್ನು ನಿಯಂತ್ರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News