ಬೆನ್ನುಜ್ಜಿಕೊಳ್ಳುವ ಖಡ್ಗ, ಸ್ಕೂಟರ್ ಟಾಯ್ಲೆಟ್‌!

Update: 2019-02-04 12:14 GMT

ಮೊಬೈಲ್ ಫೋನ್‌ನ ಕೇಸ್ ಕೂಡ ಆಗಬಲ್ಲ ಮಾಂಸವನ್ನು ಕತ್ತರಿಸುವ ಸಣ್ಣ ಮಚ್ಚು,ನೀವು ಬೆನ್ನುಜ್ಜಲು ಬಳಸಬಹುದಾದ ಖಡ್ಗ,ಹ್ಯಾಂಡಲ್ ಬಾರ್ ಮೇಲಿನ ಪುಟ್ಟ ಲಿವರ್‌ನ್ನು ಎಳೆದಾಗ ಫ್ಲಷ್ ಆಗುವ ಸ್ಕೂಟರ್ ಟಾಯ್ಲೆಟ್ ಇವುಗಳನ್ನು ನೀವೆಂದಾದರೂ ನೋಡಿದ್ದೀರಾ? ಬ್ರಿಟನ್‌ನಲ್ಲಿ ಥಾಮಸ್ ಆಲ್ವಾ ಎಂಬ ಮಹಾನ್ ಆವಿಷ್ಕಾರಿಯಿದ್ದ. ವಿದ್ಯುತ್ ಬಲ್ಬ್‌ನಿಂದ ಹಿಡಿದು ಗ್ರಾಮಾಫೋನ್‌ವರೆಗೆ ಹಲವಾರು ವಸ್ತುಗಳನ್ನು ಆವಿಷ್ಕರಿಸಿದ ಕೀರ್ತಿ ಆತನಿಗಿದೆ. ಆತ ಆವಿಷ್ಕರಿಸಿದ್ದ ಎಲ್ಲ ವಸ್ತುಗಳನ್ನು ನಾವು ಬಳಸಿದ್ದೇವೆ,ಬಳಸುತ್ತಿದ್ದೇವೆ. ಈಗ ಚೀನಾದ ಗ್ರಾಮವೊಂದರ ಕುಶಲಕರ್ಮಿ ಜೆಂಗ್ ಶುಹೈ ಕೂಡ ಹಲವಾರು ಹೊಸ ವಸ್ತುಗಳನ್ನು ಆವಿಷ್ಕರಿಸಿದ್ದಾನೆ. ಆದರೆ ಈ ಎಲ್ಲ ವಿಲಕ್ಷಣ ವಸ್ತುಗಳನ್ನು ಬಳಸುವವರು ಯಾರೂ ಇಲ್ಲ. ಹೀಗಾಗಿಯೇ ಈತನಿಗೆ ಚೀನಾದ ‘ನಿಷ್ಪ್ರಯೋಜಕ ಎಡಿಸನ್’ ಎಂಬ ಹಣೆಪಟ್ಟಿ ಅಂಟಿಕೊಂಡಿದೆ. ಈತ ತನ್ನ ಆವಿಷ್ಕಾರಗಳ ಪ್ರಾತ್ಯಕ್ಷಿಕೆಯ ಹಲವಾರು ವೀಡಿಯೊಗಳನ್ನು ಹರಿಬಿಟ್ಟಿದ್ದು,ಸಾವಿರಾರು ವೀಕ್ಷಕರನ್ನು ಹೊಂದುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದಾನೆ.

ಮೊಬೈಲ್‌ಕೇಸ್ ಕೂಡ ಆಗಿರುವ ಪುಟ್ಟಮಚ್ಚು

ಹೆಚ್ಚಿನ ದಿನಗಳಲ್ಲಿ ಮಧ್ಯರಾತ್ರಿ ಕಳೆದರೂ ಜೆಂಗ್ ನಿದ್ರಿಸುವುದಿಲ್ಲ. ಮುಂದೆ ಯಾವ ವಸ್ತುವನ್ನು ಆವಿಷ್ಕರಿಸಬೇಕು ಎಂಬ ಯೋಚನೆಯಲ್ಲಿಯೇ ಆತ ಮುಳುಗಿರುತ್ತಾನಂತೆ!

31 ಹರೆಯದ,ಪೋನಿಟೇಲ್ ಕೇಶವಿನ್ಯಾಸ ಮತ್ತು ವರ್ಕಶಾಪ್‌ಗಳಲ್ಲಿ ಧರಿಸುವ ನೀಲಿ ಬಣ್ಣದ ಡುಂಗಾರಿ ಉಡುಪಿನ ಟ್ರೇಡ್‌ಮಾರ್ಕ್‌ನ ಜೆಂಗ್‌ನ ಆವಿಷ್ಕಾರಗಳು ವಿಲಕ್ಷಣ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಅನಗತ್ಯವೂ ಆಗಿವೆ. ಆದರೆ ಇವುಗಳಿಂದಲೇ ಈತ ಖ್ಯಾತಿ ಪಡೆದಿರುವುದು ಸುಳ್ಳಲ್ಲ!

ಕಾರ್ಯನಿರತ ಜೆಂಗ್

ಚೀನಾದ ಉತ್ತರದ ಹೆಬೀ ಪ್ರಾಂತ್ಯದ ಗ್ರಾಮವೊಂದರ ನಿವಾಸಿಯಾಗಿರುವ ಜೆಂಗ್ 2017ರಲ್ಲಿ ಆನ್‌ಲೈನ್‌ನಲ್ಲಿ ತನ್ನ ಆವಿಷ್ಕಾರಗಳ ವೀಡಿಯೊಗಳನ್ನು ಪೋಸ್ಟ್ ಮಾಡಿದ ಬಳಿಕ ಇಂಟರ್ನೆಟ್‌ನಲ್ಲಿ ಆಕರ್ಷಣೆಯಾಗಿದ್ದಾನೆ. ಆಗಿನಿಂದ ಈತ ಯು ಟ್ಯೂಬ್‌ನಂತೆ ಕಿರು ವೀಡಿಯೊಗಳ ಚೀನಿ ಆ್ಯಪ್ ಆಗಿರುವ ಕ್ವಾಯಿ ಶೌ ದಲ್ಲಿ 27 ಲಕ್ಷಕ್ಕೂ ಹೆಚ್ಚಿನ ಮತ್ತು ಟ್ವಿಟರ್‌ನಂತಹ ವೀಬೊ ಸಾಮಾಜಿಕ ಮಾಧ್ಯಮದಲ್ಲಿ ಸುಮಾರು ಹತ್ತು ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾನೆ.

16ನೇ ವರ್ಷಕ್ಕೆ ಶಾಲೆಯನ್ನು ತೊರೆದಿದ್ದ ಜೆಂಗ್ ವಿವಿಧ ಕೆಲಸಗಳನ್ನು ಮಾಡುತ್ತ 12 ವರ್ಷಗಳನ್ನು ಕಳೆದಿದ್ದ. ಆದರೆ ಆತ ಮಾಡುತ್ತಿದ್ದ ಕೆಲಸಗಳು ಬೋರ್ ಹೊಡೆಸುತ್ತಿದ್ದವು. ಪ್ರತಿದಿನವೂ ಒಂದೇ ಬಗೆಯ ಕೆಲಸದಿಂದ ಬೇಸತ್ತು ಹೋಗಿದ್ದ ಜೆಂಗ್ ಬಳಿಕ ತನ್ನದೇ ಆದ ಪುಟ್ಟ ವರ್ಕಶಾಪ್ ಮಾಡಿಕೊಂಡು ವಿಲಕ್ಷಣ ಆವಿಷ್ಕಾರಗಳಲ್ಲಿ ತೊಡಗಿಕೊಂಡಿದ್ದಾನೆ.

 ಲೋಹಗಳಲ್ಲಿ ವಸ್ತುಗಳನ್ನು ನಿರ್ಮಿಸುವುದು ಜೆಂಗ್‌ಗೆ ಸಹಜವಾಗಿಯೇ ಮೈಗೂಡಿದೆ. ಬಾಲ್ಯದಲ್ಲಿ ತನ್ನ ತಂದೆ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯೊಳಗೆ ನುಸುಳಿ ಆತ ಮಾಡುತ್ತಿದ್ದ ಕೆಲಸವನ್ನು ವೀಕ್ಷಿಸುವುದು ಮತ್ತು ಆಗಾಗ್ಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದು ಆತನ ಅಭ್ಯಾಸವಾಗಿತ್ತು.

ಸ್ಟೀಲಿನ ಹ್ಯಾಂಡ್‌ಬ್ಯಾಗ್

ತನ್ನ ಆವಿಷ್ಕಾರಗಳನ್ನು ಕೈಗಳಿಂದಲೇ ನಿರ್ಮಿಸುವುದರಿಂದ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಸಹಜವಾಗಿಯೇ ಅವುಗಳ ಬೆಲೆ ಹೆಚ್ಚು,ಮಾರಾಟವೂ ಕಡಿಮೆ. ಆದರೂ ತಾನು ಹಿಂದೆ ಕೆಲಸದಲ್ಲಿದ್ದಾಗ ಗಳಿಸುತ್ತಿದ್ದಕ್ಕಿಂತ ಮೂರು ಪಟ್ಟು ಹಣವನ್ನು ಈಗ ಗಳಿಸುತ್ತಿರುವುದಾಗಿ ಜೆಂಗ್ ಹೇಳಿಕೊಂಡಿದ್ದಾನೆ

ಜೆಂಗ್‌ನ ಆದಾಯ ಮುಖ್ಯವಾಗಿ ಆತನ ಫಾಲೋವರ್‌ಗಳು ಖರೀದಿಸುವ ಆನ್‌ಲೈನ್ ಟೋಕನ್‌ಗಳು ಮತ್ತು ಆತನ ವೀಡಿಯೊಗಳಲ್ಲಿ ಪ್ರದರ್ಶಿಸಲಾಗುವ ಜಾಹೀರಾತುಗಳಿಂದ ಬರುತ್ತದೆ.

ಸ್ನಾನ ಮಾಡುವಾಗ ಬೆನ್ನುಜ್ಜಿಕೊಳ್ಳಬಹುದಾದ ಖಡ್ಗ, ಇದು ಶಾಂಪೂ ಕಂಪಾರ್ಟ್‌ಮೆಂಟ್‌ನ್ನೂ ಹೊಂದಿದೆ

ನೋರ್ಸ್ ಪೌರಾಣಿಕ ಕಥಾನಕದ ಥೋರ್ ದೇವತೆಯು ಹಿಡಿದುಕೊಂಡಿರುವ ಸುತ್ತಿಗೆಯನ್ನೇ ಹೋಲುವ ಸ್ಟೇನ್‌ಲೆಸ್ ಸ್ಟೀಲ್‌ನ ಹ್ಯಾಂಡ್‌ಬ್ಯಾಗ್ ಸೇರಿದಂತೆ ತನ್ನ ಹಲವು ಆವಿಷ್ಕಾರಗಳ ಲೈವ್ ವೀಡಿಯೊ ಸ್ಟ್ರೀಮಿಂಗ್‌ನ್ನು ಜೆಂಗ್ ಇತ್ತೀಚಿಗೆ ನಡೆಸಿದ್ದು,ಅಭಿಮಾನಿಗಳಿಂದ ಕಮೆಂಟ್‌ಗಳು,ಪ್ರಶ್ನೆಗಳು ಮತ್ತು ಲೈಕ್‌ಗಳ ಮಹಾಪೂರವೇ ಹರಿದುಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News