ಪ್ರಧಾನಿ ಮೋದಿ ದೇಶಕ್ಕೆ ಶನಿ: ಜನಾರ್ದನ ಪೂಜಾರಿ

Update: 2019-02-04 09:16 GMT

ಮಂಗಳೂರು, ಫೆ.4: ಪಶ್ಚಿಮ ಬಂಗಾಲದಲ್ಲಿ ಪ್ರಜಾಪ್ರಭುತ್ವವನ್ನು ನಾಶಗೊಳಿಸುವ ಸಂಚನ್ನು ನಡೆಸಲಾಗುತ್ತಿದ್ದು, ಪ್ರಧಾನಿ ಮೋದಿ ಈ ದೇಶಕ್ಕೆ ಶನಿಯಾಗಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಸಂದರ್ಭ ಪ್ರಚೋದನಾಕಾರಿ ಭಾಷಣ ಮಾಡಿರುವುದರಿಂದ ಜನ ರೊಚ್ಚಿಗೆದ್ದಿದ್ದಾರೆ ಎಂದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದಲ್ಲದೆ, ಸಾಯಲು ಸಿದ್ಧ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಸುಪ್ರೀಂ ಕೋರ್ಟ್ ಮೂಲಕ ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.

ಮಮತಾ ಬ್ಯಾನರ್ಜಿಯವರನ್ನು ಬೆಂಬಲಿಸಿ ಕುದ್ರೋಳಿ ಕ್ಷೇತ್ರದಲ್ಲಿ ಇಂದು ಸಂಜೆಯಿಂದ ಉಪವಾಸ ಸತ್ಯಾಗ್ರಹೆ ನಡೆಸುವುದಾಗಿ ಹೇಳಿದ ಜನಾರ್ದನ ಪೂಜಾರಿ, ಬಳಿಕ, ನಾಳೆ ಸುಪ್ರೀಂ ಕೋರ್ಟ್ ತೀರ್ಮಾನದ ಬಳಿಕ ಉಪವಾಸ ಸತ್ಯಾಗ್ರಹ ನಡೆಸುವ ತೀರ್ಮಾನ ಮಾಡುವುದಾಗಿ ಹೇಳಿದರು. ಮಮತಾ ಬ್ಯಾನರ್ಜಿಯವರು ಪ್ರಜಾಪ್ರಭುತ್ವ ಉಳಿಸಲು ಉಪವಾಸ ಸತ್ಯಾಗ್ರಹ ಮಾಡುವುದಾಗಿ, ಅದಕ್ಕಾಗಿ ಸಾಯಲೂ ಸಿದ್ಧ ಎಂದು ಹೇಳಿದ್ದಾರೆ. ಮಹಿಳೆಯ ಪ್ರಾಣ ಉಳಿಸಲು ಪ್ರಧಾನಿ ಮುಂದಾಗಬೇಕು ಎಂದು ಅವರು ಹೇಳಿದರು.

ಪ್ರಶ್ನೆಗೆ ಸಿಗದ ಉತ್ತರ: ಪತ್ರಕರ್ತರ ಜತೆ ವಾಗ್ವಾದ!

ರೋಸ್ ವ್ಯಾಲಿ ಹಾಗೂ ಶಾರದಾ ಚಿಟ್ ಫಂಡ್ ಹಗರಣದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ವಿಚಾರಣೆಗೆ ಸಿಬಿಐ ಮುಂದಾಗಿದೆ. ಹಗರಣ ಆರೋಪವನ್ನು ಎದುರಿಸುತ್ತಿರುವ ರಾಜೀವ್ ಕುಮಾರ್ ಪರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿಂತಿದ್ದು, ಅವರಿಗೆ ನೀವು ಬೆಂಬಲ ನೀಡುವುದು ಭ್ರಷ್ಟಾಚಾರಕ್ಕೆ ಬೆಂಬಲವಲ್ಲವೇ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದು ಸರಿಯೇ ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆಯಿತು. ಪ್ರಶ್ನೆಗೆ ಉತ್ತರಿಸುವ ಬದಲು ಆಕ್ರೋಶದಿಂದಲೇ ‘ಇನ್ನೂ ನಿಮ್ಮ ಪ್ರಶ್ನೆ ಇದೆಯೇ?’ ಎಂದು ಕೇಳಿದರಲ್ಲದೆ, ಇದ್ದರೆ ಹೊರಗೆ ಕಳುಹಿಸುತ್ತೇನೆ ಎಂದು ಹೇಳಿದಾಗ, ಈ ರೀತಿ ಪತ್ರಕರ್ತರು ಕೇಳುವ ಪ್ರಶ್ನೆಗೆ ಉತ್ತರಿಸುವುದು ಸರಿಯಲ್ಲ ಎಂದು ಕೆಲಹೊತ್ತು ಪತ್ರಕರ್ತರು ಹಾಗೂ ಜನಾರ್ದನ ಪೂಜಾರಿ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ಕೊನೆಯವರೆಗೂ ಪತ್ರಕರ್ತರ ಪ್ರಶ್ನೆಗೆ ಪೂಜಾರಿ ಉತ್ತರ ಮಾತ್ರ ನೀಡಲಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News