ಕೇಂದ್ರದಿಂದ ಉದ್ಯೋಗ ಖಾತ್ರಿ ಯೋಜನೆಯ 2,059 ಕೋ.ರೂ. ಬಾಕಿ: ಯು.ಟಿ.ಖಾದರ್

Update: 2019-02-04 10:47 GMT

ಮಂಗಳೂರು, ಫೆ.4: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಎನ್‌ಆರ್‌ಇಜಿ) ರಾಜ್ಯ ಸರಕಾರಕ್ಕೆ ಕೇಂದ್ರದಿಂದ 2,059 ಕೋಟಿ ರೂ. ಅನುದಾನ ಇದುವರೆಗೂ ಬಂದಿಲ್ಲ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದರೂ ಅನುದಾನ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯ ಕ್ರಮದ ಬಗ್ಗೆ ಬರ ಅಧ್ಯಯನ ಸಮಿತಿ ಸದಸ್ಯರು, ಗ್ರಾಮೀಣಾಭಿವೃದ್ಧಿ, ಕಂದಾಯ ಸಚಿವರು ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿದ್ದಾರೆ. ಯೋಜನೆಯನ್ನು ಮುಂದುವರಿಸುವ ದೃಷ್ಟಿಯಿಂದ ಉದ್ಯೋಗ ಖಾತ್ರಿ ಯೋಜನೆಯ ಬಾಕಿ ಮೊತ್ತವನ್ನು ರಾಜ್ಯ ಸರಕಾರವೇ ಭರಿಸುವ ಚಿಂತನೆ ಇದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
 
*ಕುಡಿಯುವ ನೀರಿಗೆ ತುರ್ತು ವೆಚ್ಚಮಾಡಲು ನಿಯಮ ಸಡಿಲಿಕೆ:

14ನೇ ಹಣಕಾಸು ಆಯೋಗದ ಪ್ರಕಾರ ಗ್ರಾಮ ಪಂಚಾಯತ್‌ಗಳಲ್ಲಿ ಕುಡಿಯುವ ನೀರಿಗೆ ಶೇ.20ಕ್ಕಿಂತ ಹೆಚ್ಚು ವೆಚ್ಚ ಮಾಡಲು ಅವಕಾಶ ಇರಲಿಲ್ಲ. ನೂತನ ನಿಯಮಾವಳಿಯಲ್ಲಿ ಈ ಮಿತಿಯನ್ನು ತೆಗೆಯಲಾಗಿದೆ. ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ 100 ತಾಲೂಕುಗಳಿಗೆ ಒಂದು ಕೋಟಿ ರೂ., 62 ತಾಲೂಕುಗಳಿಗೆ ತಲಾ 50 ಲಕ್ಷ ರೂ., 14 ತಾಲೂಕುಗಳಿಗೆ ತಲಾ 25 ಲಕ್ಷ ರೂ., ಮಹಾನಗರ ಪಾಲಿಕೆಗಳಿಗೆ 50 ಲಕ್ಷ ರೂ., ನಗರ ಪಾಲಿಕೆಗಳಿಗೆ 25 ಲಕ್ಷ ರೂ., ಪಟ್ಟಣ ಪಂಚಾಯತ್‌ಗಳಿಗೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲು ಸರಕಾರ ತೀರ್ಮಾನಿಸಿದೆ. ದಕ್ಷಿನ ಕನ್ನಡ ಜಿಲ್ಲೆಯ ಏಳು ತಾಲೂಕಿಗಳಿಗೆ ಈಗಾಗಲೇ ತಲಾ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲಿ 25 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News