ತಮ್ಮನಿಗೆ ಸರಕಾರಿ ಉದ್ಯೋಗ ಲಭಿಸಿದ್ದಕ್ಕೆ ಸಿಟ್ಟಾದ ಅಣ್ಣನಿಂದ ಮನೆಗೆ ಬೆಂಕಿ: ನಾಲ್ವರು ಸಾವು

Update: 2019-02-04 13:01 GMT
ಸಾಂದರ್ಭಿಕ ಚಿತ್ರ

ಕೊಲ್ಕತ್ತಾ, ಫೆ.4: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಮದನ್‍ತೊಲ ಎಂಬ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅನುಕಂಪದ ಆಧಾರದಲ್ಲಿ ತನ್ನ ತಮ್ಮನಿಗೆ ಸರಕಾರಿ ಉದ್ಯೋಗ ಲಭಿಸಿದ ಮಾಹಿತಿ ಪಡೆದ 30 ವರ್ಷದ ವ್ಯಕ್ತಿಯೊಬ್ಬ ಸಿಟ್ಟಿನಿಂದ ತನ್ನ ಮನೆಯ ಎರಡು ಕೊಠಡಿಗಳಿಗೆ ಬೆಂಕಿಯಿಕ್ಕಿದ ಘಟನೆ ನಡೆದಿದೆ. ಪರಿಣಾಮ ಆತನ ತಮ್ಮ ಸಹಿತ ಕುಟುಂಬದ ನಾಲ್ಕು ಮಂದಿ ಸದಸ್ಯರು ಮೃತಪಟ್ಟರೆ, ಇನ್ನು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕುಟುಂಬ ಸದಸ್ಯರೆಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ರವಿವಾರ ರಾತ್ರಿ ಆರೋಪಿ ಮಖನ್ ಮೊಂಡಾಲ್ ಎಂಬಾತ ಹೆಂಚಿನ ಮಾಡು ಹೊಂದಿದ್ದ ತನ್ನ ಗುಡಿಸಲಿನ ಎರಡು ಕೊಠಡಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಆತನ ತಮ್ಮ ಗೋವಿಂದ (28), ಅಣ್ಣ ಬಿಕಾಶ್ (32), ಗೋಬಿಂದನ ಒಂದೂವರೆ ವರ್ಷದ  ಹಾಗೂ ಮೂರು ವರ್ಷದ ಇಬ್ಬರು ಪುತ್ರಿಯರು ಸುಟ್ಟು ಕರಕಲಾಗಿದ್ದಾರೆ. ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಉಳಿದಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬಿಕಾಶ್ ನ ಪತ್ನಿ, ಪುತ್ರ, ಪುತ್ರಿ ಹಾಗೂ ಗೋವಿಂದನ ಪತ್ನಿ ಮಾಲ್ಡಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಸೋದರರ ತಾಯಿ ಇನ್ನೊಂದು ಕೊಠಡಿಯಲ್ಲಿ ಮಲಗಿದ್ದರಿಂದ ಬಚಾವಾಗಿದ್ದಾಳೆ. ತರುವಾಯ ತವರು ಮನೆಯಲ್ಲಿದ್ದ ಆರೋಪಿಯ ಪತ್ನಿ ತಲೆಮರೆಸಿಕೊಂಡಿದ್ದಾಳೆ. ನ್ಯಾಷನಲ್ ವಾಲಂಟಿಯರ್ ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸೋದರರ ತಂದೆ ಗೇಡು ಮೊಂಡಾಲ್ ಕೆಲ ಸಮಯದ ಹಿಂದೆ ಮೃತಪಟ್ಟ ನಂತರ ಗೋವಿಂದನಿಗೆ ಬಿಕಾಶ್ ಸಹಾಯದಿಂದ ಅನುಕಂಪದ ಆಧಾರದಲ್ಲಿ ಕೆಲಸ ದೊರಕಿದ್ದರಿಂದ ಮಖಾನ್ ಸಿಟ್ಟುಗೊಂಡಿದ್ದ.

ಅವರೆಲ್ಲರೂ ಕೃಷಿ ಕಾರ್ಮಿಕರಾಗಿದ್ದರು. ಅವರ ಇನ್ನೊಬ್ಬ ಸೋದರ ಲಕ್ಷ್ಮಣ್ ದಿಲ್ಲಿಯಲ್ಲಿ ವಾಸವಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News