ಅಣ್ಣಾ ಹಜಾರೆ ಬದುಕಿದ್ದರೂ, ಸತ್ತರೂ ಬಿಜೆಪಿಗೆ ಪರಿವೆಯಿಲ್ಲ: ರಾಜ್ ಠಾಕ್ರೆ

Update: 2019-02-04 13:08 GMT

ಮುಂಬೈ, ಫೆ.4: ಲೋಕಪಾಲ್ ನೇಮಕಾತಿಗೆ ಕೇಂದ್ರ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ತಮ್ಮ ಹುಟ್ಟೂರು ರಾಲೆಗಾಂವ್ ಸಿದ್ಧಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆಯನ್ನು ಭೇಟಿಯಾದ ಮಹಾರಾಷ್ಟ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಉಪವಾಸ ಕೈಬಿಡುವಂತೆ ಮನವಿ ಮಾಡಿದರಲ್ಲದೆ ಉಪವಾಸ ನಡೆಸುವ ಬದಲು ‘ಬಿಜೆಪಿ ಸರಕಾರವನ್ನು ಹೂಳಲು' ಶ್ರಮಿಸುವಂತೆ ಕೋರಿದರು.

“ಅವರು ಬದುಕಿದರೂ, ಸತ್ತರೂ ಬಿಜೆಪಿಗೆ ಪರಿವೆಯಿಲ್ಲ. ಈ ನಿರುಪಯೋಗಿ ಜನರಿಗಾಗಿ ನಿಮ್ಮ ಜೀವವನ್ನು ಅಪಾಯಕ್ಕೊಡ್ಡಬೇಡಿ ಎಂದು ಅವರಿಗೆ ಹೇಳಿದೆ. ಮುಂದಿನ ಚುನಾವಣೆಯಲ್ಲಿ ಅವರ ಸರಕಾರವನ್ನು ಇಲ್ಲವಾಗಿಸಲು ನಾವು ಜನರ ಬಳಿಗೆ ಹೋಗೋಣ ಎಂದು ಅವರಿಗೆ ಹೇಳಿದೆ” ಎಂದು ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ರಾಜ್ ಠಾಕ್ರೆ ಹೇಳಿದರು.

“ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ. ಪ್ರಧಾನಿ ಹುದ್ದೆ ಪಡೆದ ಅತ್ಯಂತ ದೊಡ್ಡ ಸುಳ್ಳುಗಾರ ಅವರಾಗಿದ್ದಾರೆ. ಡಿಸೆಂಬರ್ 2013ರಲ್ಲಿ ಅವರು ಲೋಕಪಾಲ್ ಬೆಂಬಲಿಸಿದ್ದರು. ಈಗ ಅವರು ಅಧಿಕಾರದಲ್ಲಿದ್ದರೂ ಏನೂ ಮಾಡಿಲ್ಲ” ಎಂದು ಠಾಕ್ರೆ ಹೇಳಿದರು.

ರಾಜ್ ಠಾಕ್ರೆ ತಮ್ಮನ್ನು ಭೇಟಿಯಾದ ನಂತರ ಮಾಧ್ಯಮ ಮಂದಿಯ ಜತೆ ಮಾತನಾಡಿದ ಅಣ್ಣಾ ಹಜಾರೆ, “ನನ್ನ ಜತೆ ಮಾತನಾಡಲು ಕೇಂದ್ರ ಸಚಿವರೊಬ್ಬರನ್ನು ಕಳುಹಿಸಲಾಗಿದೆ ಎಂಬ ಮಾಹಿತಿ ದೊರಕಿತು. ಸರಕಾರದ ನಿಲುವನ್ನು ಮೊದಲು ಸ್ಪಷ್ಟ ಪಡಿಸಿ ಎಂದು ಹೇಳಿ ಅವರನ್ನು ಭೇಟಿಯಾಗಲು ನಿರಾಕರಿಸಿದ್ದೇನೆ'' ಎಂದು ಹೇಳಿದ ಅವರು ಸಚಿವರ ಹೆಸರನ್ನು ಬಹಿರಂಗಗೊಳಿಸಿಲ್ಲ.

“ಲೋಕಪಾಲ ನೇಮಕಾತಿಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವಾಗ ನನ್ನನ್ನು ಭೇಟಿಯಾಗಿ ಏನು ಪ್ರಯೋಜನ?'' ಎಂದು ಹೇಳಿದ ಹಜಾರೆ ತಮಗೆ ಇನ್ನೂ ಐದು ದಿನಗಳ ಕಾಲ ಉಪವಾಸ ನಡೆಸುವ ಶಕ್ತಿಯಿದೆ ಎಂದರು.

ಲೋಕಪಾಲ್ ವಿಚಾರದಲ್ಲಿ ಕೇಂದ್ರದ ಹಾಗೂ ರಾಜ್ಯಗಳ ಬಿಜೆಪಿ ಸರಕಾರಗಳು ತನ್ನನ್ನು ಕಳೆದ ಕೆಲ ವರ್ಷಗಳಿಂದ ತಪ್ಪು ದಾರಿಗೆಳೆದಿವೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News