ನಾಳೆ ಇಸ್ರೋದ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31ರ ಉಡಾವಣೆಗೆ ರಂಗ ಸಜ್ಜು
Update: 2019-02-04 19:10 IST
ಬೆಂಗಳೂರು,ಫೆ.4: ಬುಧವಾರ ಫ್ರೆಂಚ್ ಗಯಾನಾದ ಕೌರು ಉಡಾವಣಾ ಕೇಂದ್ರದಿಂದ ತನ್ನ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31ನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಲು ಇಸ್ರೋ ಸಜ್ಜಾಗಿದೆ.
15 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಜಿಸ್ಯಾಟ್-31 ಈಗಾಗಲೇ ಭೂಸ್ಥಿರ ಕಕ್ಷೆಯಲ್ಲಿರುವ ಕೆಲವು ಉಪಗ್ರಹಗಳ ಕಾರ್ಯಾಚರಣೆಗಳಿಗೆ ನಿರಂತರತೆಯನ್ನು ಒದಗಿಸಲಿದೆ ಮತ್ತು ಕ್ಯು-ಬ್ಯಾಂಡ್ ಟ್ರಾನ್ಸ್‌ಪಾಂಡರ್‌ನ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಇಸ್ರೋ ತಿಳಿಸಿದೆ.
ಸುಮಾರು 2,535 ಕೆ.ಜಿ.ತೂಕದ ಉಪಗ್ರಹವನ್ನು ಫ್ರೆಂಚ್ ಗಯಾನಾದ ಕೌರುವಿನಿಂದ ಏರಿಯಾನ್-5 ಅಂತರಿಕ್ಷ ನೌಕೆಯ ಮೂಲಕ ನಿಗದಿತ ಕಕ್ಷೆಗೆ ಸೇರಿಸಲಾಗುವುದು ಎಂದು ಅದು ಹೇಳಿದೆ.
ವಿಸ್ಯಾಟ್ ಜಾಲಗಳು,ಟಿವಿ ಅಪ್‌ಲಿಂಕ್‌ಗಳು,ಡಿಜಿಟಲ್ ಉಪಗ್ರಹ ಸುದ್ದಿ ಸಂಗ್ರಹ,ಡಿಟಿಎಚ್ ಟೆಲಿವಿಷನ್ ಸೇವೆಗಳು ಇತ್ಯಾದಿಗಳನ್ನು ಜಿಸ್ಯಾಟ್-31 ಬೆಂಬಲಿಸಲಿದೆ ಎಂದೂ ಇಸ್ರೋ ಹೇಳಿದೆ.