ಸಿಬಿಐ ಜಂಟಿ ನಿರ್ದೇಶಕರಿಗೆ ಸಮನ್ಸ್ ಕಳುಹಿಸಿದ ಪಶ್ಚಿಮ ಬಂಗಾಳ ಪೊಲೀಸ್
ಕೊಲ್ಕತಾ,ಫೆ.4: ಬಹುಕೋಟಿ ರೂ. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಪಶ್ಚಿಮ ಬಂಗಾಳ ಪೊಲೀಸ್ ಆಯುಕ್ತ ರಾಜೀನ್ ಕುಮಾರ್‌ರನ್ನು ಪ್ರಶ್ನಿಸಲು ಸಿಬಿಐ ರವಿವಾರ ವಿಫಲಯತ್ನ ನಡೆಸಿದ ನಂತರದ ಬೆಳವಣಿಗೆಯಲ್ಲಿ ರಾಜ್ಯ ಪೊಲೀಸರು ಸಿಬಿಐ ಜಂಟಿ ನಿರ್ದೇಶಕ (ಕೊಲ್ಕತಾ ವಲಯ) ಪಂಕಜ್ ಶ್ರೀವಾಸ್ತವ ಅವರಿಗೆ ಸಮನ್ಸ್ ಜಾರಿ ಮಾಡುವ ಮೂಲಕ ಹೊಸ ತಿರುವು ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ ಭೊವನಿಪೊರದ ಮೂವರು ಪೊಲೀಸರು ದಕ್ಷಿಣ ಕೊಲ್ಕತಾದ ನಿಝಾಮ್ ಪ್ಯಾಲೆಸ್‌ನ 16ನೇ ಮಹಡಿಯಲ್ಲಿರುವ ಶ್ರೀವಾಸ್ತವ ಅವರ ಕಚೇರಿಗೆ ತೆರಳಿ ಅಪರಾಧ ಪ್ರಕ್ರಿಯೆ ಸಂಹಿತೆಯ ವಿಧಿ 160ರ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 45 ಲಕ್ಷ ರೂ. ವಂಚನೆಯ ಹಳೆ ಪ್ರಕರಣದಲ್ಲಿ ಸಾಕ್ಷಿದಾರರಾಗಿ ತನ್ನ ಹೇಳಿಕೆಯನ್ನು ದಾಖಲಿಸಲು ಭೊವನಿಪೊರ ಪೊಲೀಸ್ ಠಾಣೆಗೆ ಹಾಜರಾಗುವಂತೆ ಪಂಕಜ್ ಶ್ರೀವಾಸ್ತವ್‌ಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಬಳಿ ಕುಮಾರ್ ವಿರುದ್ಧ ಅಗತ್ಸ ದಾಖಲೆಗಳಿದ್ದರೂ ದಕ್ಷಿಣ ಕೊಲ್ಕತಾದಲ್ಲಿರುವ ಅವರ ನಿವಾಸಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ ಮತ್ತು ಪೊಲೀಸರು ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶ್ರೀವಾಸ್ತವ ಆರೋಪಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸರು ಸಮನ್ಸ್ ಜಾರಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.