ಪ್ರಿಯಾಂಕಾ ಗಾಂಧಿ ವಿರುದ್ಧ ಅವಮಾನಕರ ಟ್ವೀಟ್: ಬಿಹಾರದ ವ್ಯಕ್ತಿಯ ಬಂಧನ

Update: 2019-02-04 16:19 GMT

ಪಾಟ್ನಾ, ಫೆ. 4: ಉತ್ತರಪ್ರದೇಶ (ಪೂರ್ವ)ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕುರಿತು ಅಶ್ಲೀಲ ಟ್ವೀಟ್ ಪೋಸ್ಟ್ ಮಾಡಿದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.

ಬಿಹಾರದ ಶಹೀನ್ ಸೈಯದ್ ಸೈಬರ್ ಕ್ರೈಮ್ ತನಿಖಾ ಘಟಕಕ್ಕೆ ನೀಡಿದ ದೂರಿನ ಆಧಾರದಲ್ಲಿ ವಿನೋದ್‌ಪುರದ ನಿವಾಸಿ ಯೋಗಿ ಸಂಜಯ್‌ನಾಥ್‌ರನ್ನು ಬಂಧಿಸಲಾಗಿದೆ ಎಂದು ಕಥಿಯಾರ್ ಪಟ್ಟಣ ಪೊಲೀಸ್ ಠಾಣೆಯ ಅಧಿಕಾರಿ ರಂಜನ್ ಕುಮಾರ್ ಹೇಳಿದ್ದಾರೆ. ಜನವರಿ 23ರಂದು ಕಾಂಗ್ರೆಸ್‌ನ ನಾಯಕತ್ವ ವಹಿಸಿದ ಬಳಿಕ ವಾದ್ರಾ ಅವರ ವಿರುದ್ಧದ ಟೀಕೆಗಳು ಹೆಚ್ಚುತ್ತಿವೆ. ಜನವರಿ 27ರಂದು ಬಿಜೆಪಿ ಸಂಸದ ಸುಬ್ರಹ್ಮಣೀಯನ್ ಸ್ವಾಮಿ, ವಾದ್ರಾ ಅವರಿಗೆ ಬಯೋಪೋಲಾರ್ ರೋಗವಿದೆ. ಅವರು ಜನರನ್ನು ದೈಹಿಕವಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದಿದ್ದರು.

ಈ ನಡುವೆ, ವಾದ್ರಾ ವಿರುದ್ಧ ಅಮಾನಕರ ಟೀಕೆ ವಿರುದ್ಧ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ವರಿಷ್ಠೆ ಸುಶ್ಮಿತಾ ದೇವ್ ನೇತೃತ್ವದ ಮಹಿಳೆಯರ ಗುಂಪು ದಿಲ್ಲಿಯಲ್ಲಿ ಪ್ರಕರಣ ದಾಖಲಿಸಿದೆ. ‘‘ನಾವು ಕೆಲವು ಪುರಾವೆಗಳ ಜೊತೆಗೆ ಪಾರ್ಲಿಮೆಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ.’’ ಎಂದು ಸುಶ್ಮಿತಾ ದೇವ್ ಹೇಳಿದ್ದಾರೆ. ‘‘ಇದರ ಹಿಂದೆ ಬಿಜೆಪಿ ಹಾಗೂ ಆರೆಸ್ಸೆಸ್ ಕೈವಾಡ ಇದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಸತ್ಯ ಬಹಿರಂಗಗೊಳಿಸಬೇಕು ಎಂದು ನಾವು ಬಯಸುತ್ತೇವೆ.’’ ಎಂದು ಅವರು ಹೇಳಿದ್ದಾರೆ. ದೇಶದ ಪ್ರತಿ ರಾಜ್ಯಗಳಲ್ಲಿ ವಾದ್ರಾ ಕುರಿತು ಟೀಕೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪಕ್ಷದ ಸದಸ್ಯರಲ್ಲಿ ಮಹಿಳಾ ಕಾಂಗ್ರೆಸ್ ಆಗ್ರಹಿಸಿದ್ದೆ ಎಂದು ದೇವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News