ಸುಲಿಗೆ ಪ್ರಕರಣ ಆರೋಪಿ ಭಾರತಿ ಘೋಶ್ ಬಿಜೆಪಿಗೆ

Update: 2019-02-04 16:51 GMT

ಕೊಲ್ಕತಾ,ಫೆ.4: ಸುಲಿಗೆ ಮತ್ತು ಅಪರಾಧಿ ಸಂಚಿನ ಆರೋಪದಲ್ಲಿ ಸದ್ಯ ಸಿಐಡಿ ನಿಗಾದಲ್ಲಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾರತಿ ಘೋಶ್ ಸೋಮವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಆಪ್ತರಾಗಿದ್ದ ಘೋಶ್ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಭಾರತಿ ಘೋಶ್‌ರನ್ನು ಪಕ್ಷಕ್ಕೆ ಸ್ವಾಗತಿಸಿರುವ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕುಟುಂಬ ಬೆಳೆಯುತ್ತಲೇ ಹೋಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಚಂದನ್ ಮಜಿ ಎಂಬವರು ಸಲ್ಲಿಸಿದ ಸುಲಿಗೆ ಮತ್ತು ಅಪರಾಧಿ ಸಂಚಿನ ದೂರಿನ ಆಧಾರದಲ್ಲಿ ಸಿಐಡಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಈ ಬಗ್ಗೆ ಸಿಐಡಿ ಪಶ್ಚಿಮ ಮಿಡ್ನಾಪೊರ್‌ನ ಘತಲ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ದೋಷಾರೋಪದಲ್ಲಿ ಭಾರತಿ ಘೋಶ್ ಸೇರಿದಂತೆ ಎಂಟು ಮಂದಿಯನ್ನು ತಲೆಮರೆಸಿಕೊಂಡ ಆರೋಪಿಗಳೆಂದು ತಿಳಿಸಿತ್ತು.

ಆದರೆ ಆಂಗ್ಲ ಪತ್ರಿಕೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸಿಕ್ಕಿರುವ ಧ್ವನಿಮುದ್ರಣದ ತುಣುಕಿನಲ್ಲಿ ಘೋಶ್, “ನಾನು ತಲೆಮರೆಸಿಕೊಂಡಿಲ್ಲ ಮತ್ತು ಶೀಘ್ರದಲ್ಲಿ ಜನರ ಮುಂದೆ ಬರುತ್ತೇನೆ. ನನ್ನನ್ನು ಬಂಧಿಸದಂತೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಹಾಗಾಗಿ ನಾನು ತಲೆಮರೆಸಿಕೊಂಡಿಲ್ಲ. ಜನರು ನನ್ನ ಘನತೆಗೆ ಕುಂದುಂಟು ಮಾಡಲು ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ” ಎಂದು ಹೇಳುತ್ತಿರುವುದು ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News