×
Ad

"ಐಪಿಎಸ್ ಅಧಿಕಾರಿಗಳ ಮೇಲೆ ನಿಗಾ ಇಟ್ಟು ಹೆದರಿಸಲು ಸಿಬಿಐಗೆ ಸಾಧ್ಯವೇ ?"

Update: 2019-02-04 23:38 IST

ಹೊಸದಿದಿಲ್ಲಿ, ಫೆ. 4: ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿರುದ್ಧ ಸಿಬಿಐ ಕ್ರಮದಿಂದ ಕೇಂದ್ರ ಹಾಗೂ ಪಶ್ಚಿಮಬಂಗಾಳದ ಬಿಕ್ಕಟ್ಟು ಸೋಮವಾರ ಉಲ್ಬಣಗೊಂಡಿರುವಂತೆ, ಬಿಜೆಪಿ ನಾಯಕರಾದ ಕೈಲಾಸ್ ವಿಜಯವರ್ಗೀಯ ಹಾಗೂ ಮುಕುಲ್ ರಾಯ್ ನಡುವಿನ ದೂರವಾಣಿ ಸಂಭಾಷಣೆ ಎಂದು ಹೇಳಲಾದ ಆಡಿಯೊ ಟೇಪ್ ಸಾಮಾಜಿಕ ಜಾಲ ತಾಣದಲ್ಲಿ ಹರಡುತ್ತಿದೆ.

ಇದು ಸಿಬಿಐಯ ಸ್ವಾಯತ್ತತೆ ಮೇಲೆ ಮತ್ತೆ ಸಂಶಯ ಮೂಡವಂತೆ ಮಾಡಿದೆ. ಈ ವೀಡಿಯೊ ಕ್ಲಿಪ್‌ನ ಬಗೆಗಿನ ವರದಿ ಬೆಂಗಾಳಿ ದಿನಪತ್ರಿಕೆ ಆನಂದ ಬಜಾರ್‌ನಲ್ಲಿ 2018 ಅಕ್ಟೋಬರ್‌ರಲ್ಲಿ ಪ್ರಕಟವಾಗಿತ್ತು. ನಾಲ್ವರು ಐಪಿಎಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡ ಕೇಂದ್ರ ಸರಕಾರದ ಇಬ್ಬರು ಅಧಿಕಾರಿಗಳನ್ನು ಬಂಗಾಳಕ್ಕೆ ವರ್ಗಾಯಿಸಲಾಗಿದೆ ಎಂದು ಬಿಜೆಪಿಯ ಬಂಗಾಳ ಉಸ್ತುವಾರಿ ಕೈಲಾಸ್ ವಿಜಯವರ್ಗೀಯ ಹೇಳುವುದನ್ನು ಬಿಜೆಪಿಯ ನಾಯಕ ಮುಕುಲ್ ರಾಯ್ ಕೇಳುತ್ತಿರುವುದು ಆಡಿಯೊ ಕ್ಲಿಪ್‌ನಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ. ಇವರಿಬ್ಬರ ನಡುವಿನ ಸಂಭಾಷಣೆ ಹಿಂದಿಯಲ್ಲಿ ನಡೆದಿದೆ.

ಬಂಗಾಳದಲ್ಲಿ ಮಥುವಾ ಸಮುದಾಯದೊಂದಿಗೆ ಸಂಪರ್ಕ ಸಾಧಿಸುವ ಕೆಲವು ನೂತನ ನಾಯಕರ ಬಗ್ಗೆ ಮೊದಲು ವಿಜಯ ವರ್ಗೀಯ ಪ್ರಶ್ನಿಸುತ್ತಿರುವುದು ಆಡಿಯೊ ಕ್ಲಿಪ್‌ನಲ್ಲಿ ಕೇಳಿ ಬಂದಿದೆ. ಅನಂತರ, “ಅಮಿತ್ ಶಾ ಅವರನ್ನು ಶೀಘ್ರ ಭೇಟಿಯಾಗಲಿರುವ ಅಧ್ಯಕ್ಷರಲ್ಲಿ ಏನಾದರೂ ಕೇಳಲು ಇದೆಯೇ ?” ವಿಜಯವರ್ಗೀಯ ಅವರು ರಾಯ್ ಅವರಲ್ಲಿ ಪ್ರಶ್ನಿಸುವುದು ಕೇಳಿ ಬಂದಿದೆ. ಒಂದು ವೇಳೆ ನಾಲ್ಕು ಐಪಿಎಸ್ ಅಧಿಕಾರಿಗಳ ಮೇಲೆ ನಿಗಾ ಇಡಲು ಸಿಬಿಐಗೆ ಸಾಧ್ಯವಿದೆಯೇ ?, ಇದರಿಂದ ಬಂಗಾಳದ ಐಪಿಎಸ್ ಅಧಿಕಾರಿಗಳಲ್ಲಿ ಭಯ ಹುಟ್ಟುತ್ತದೆ ಎಂದು ರಾಯ್ ಪ್ರಶ್ನಿಸುವುದು ಕೇಳಿ ಬಂದಿದೆ. ಆದರೆ, ಐಪಿಎಸ್ ಅಧಿಕಾರಿಗಳ ಹೆಸರು ಹೇಳಿಲ್ಲ.

ವಿಜಯ ವರ್ಗೀಯ ಅವರೊಂದಿಗಿನ ಎರಡು ಸಂಭಾಷಣೆಗಳು ಸಾಮಾಜಿಕ ಜಾಲ ತಾಣದಲ್ಲಿ ಪ್ರಸಾರವಾದ ಬಳಿಕ ತನ್ನ ದೂರವಾಣಿ ಸಂಭಾಷಣೆಯನ್ನು ರಾಜ್ಯ ಸರಕಾರ ಕಾನೂನು ಬಾಹಿರವಾಗಿ ಆಲಿಸುತ್ತಿದೆ ಎಂದು ರಾಯ್ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News