ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದಿಂದ ದಾಖಲೆಯ ರಕ್ತ ಸಂಗ್ರಹ!

Update: 2019-02-05 07:48 GMT

ಬಂಟ್ವಾಳ, ಫೆ.5: ರಕ್ತದಾನ ಮಾಡುವ ಮೂಲಕ ರಕ್ತ ಸಂಬಂಧಿಗಳಾಗೋಣ ಎಂಬ ಉದ್ದೇಶವನ್ನಿಟ್ಟು ರೋಗಿಗಳಿ ಅಗತ್ಯವಾದ ರಕ್ತ ಪೊರೈಕೆ ಮಾಡುವ ಮೂಲಕ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ತಂಡ ವಿಶೇಷ ಸಾಧನೆ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿನ ಅನಿವಾಸಿ ಭಾರ ತೀಯ ಗೆಳೆಯರ ತಂಡವೊಂದು 2016 ಆಗಸ್ಟ್ 8ರಂದು ವಾಟ್ಸ್‌ಆ್ಯಪ್ ಮೂಲಕ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಎಂಬ ಗ್ರೂಪನ್ನು ರಚಿಸಿ ಜಾತಿ, ಬೇಧ ವಿಲ್ಲದೆ ರೋಗಿಗಳಿಗೆ ಅಗತ್ಯವಾದ ರಕ್ತವನ್ನು ಪೊರೈಕೆ ಮಾಡುವ ಸೇವೆಯಲ್ಲಿ ತೊಡಗಿಕೊಂಡಿದೆ.

2017ರಲ್ಲಿ ಕರ್ನಾಟಕ ಸರಕಾರದಿಂದ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿರುವ ಸಂಸ್ಥೆಯು ಊರ ಮತ್ತು ಪರವೂರಿನ 30 ಅಧಿಕೃತ ನಿರ್ವಾಹಕರ ಮೂಲಕ ಕಾರ್ಯಾಚರಿಸುತ್ತಿದ್ದು, 20 ವಾಟ್ಸ್‌ಆ್ಯಪ್ ಗ್ರೂಪ್‌ಗಳ ಮುಖಾಂತರ 4 ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದ್ದು, ಫೇಸ್‌ಬುಕ್‌ನಲ್ಲಿ 5 ಸಾವಿರ ಸದಸ್ಯರ ಬಲವನ್ನು ಹೊಂದಿದೆ. ಇವರೆಲ್ಲರೂ ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿ ನೋಂದಣಿಯಾಗಿದ್ದಾರೆ.

ಸದಸ್ಯನ ಮಾದರಿ ಕಾರ್ಯ: ಕೆಎಂಸಿ ಆಸ್ಪತ್ರೆಯಲ್ಲಿ ಅನಾರೋಗ್ಯಪೀಡಿತ ಮಹಿಳೆ ಮತ್ತು ಮಗುವಿಗೆ ತುರ್ತಾಗಿ ರಕ್ತದ ಅಗತ್ಯವನ್ನು ಮನಗಂಡ ಬ್ಲಡ್ ಹೆಲ್ಪ್‌ಲೈನ್ ಸದಸ್ಯ ಮುಹಮ್ಮದ್ ಅಲ್ತಾಫ್ ಕಲಾಯಿ ಉಪವಾಸ ಹೊತ್ತು ರಕ್ತದಾನ ಮಾಡಿ ಮಾನವೀಯತೆ ಮೆರೆಯುವ ಮೂಲಕ ಸಾರ್ವಜನಿಕರ ಪ್ರಸಂಶೆಗೆ ಪಾತ್ರರಾಗಿದ್ದರು.

ಎರಡು ವರ್ಷವನ್ನು ಪೊರೈಸಿದ ಸಂದರ್ಭದಲ್ಲಿ ಸಂಸ್ಥೆಯು, ವಾರ್ಷಿಕೋತ್ಸವದ ಅಂಗವಾಗಿ ಕರಾವಳಿ ಪ್ರದೇಶದ ವಿವಿಧ ನಗರಗಳಲ್ಲಿ 5 ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ 355 ಯೂನಿಟ್ ರಕ್ತವನ್ನು ಸಂಗ್ರಹಿಸಿ ಸಾಧನೆಯನ್ನು ಮಾಡಿದೆ.

ವಿದೇಶದಲ್ಲೂ ಸೇವೆ: ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯು ಮಂಗಳೂರು, ಸುಳ್ಯ, ಪುತ್ತೂರು, ಮಣಿಪಾಲ, ಉಡುಪಿ, ರಾಯಚೂರು, ಕಲ್ಬುರ್ಗಿ, ಮೈಸೂರು, ಬೆಂಗಳೂರು ಮುಂತಾದ ಕರ್ನಾಟಕದ ಬಹುತೇಕ ಮಹಾ ನಗರಗಳಲ್ಲಿ ರೋಗಿಗಳಿಗೆ ರಕ್ತವನ್ನು ಪೊರೈಕೆ ಮಾಡುತ್ತಿದೆ. ಅಲ್ಲದೇ, ಸೌದಿ ಅರೇಬಿಯಾ ಮತ್ತು ಯುಎಇ ಮುಂತಾದ ಅರಬ್ ರಾಷ್ಟ್ರಗಳಲ್ಲೂ ಕಾರ್ಯಾಚರಿಸುತ್ತಿದೆ.

ಕರಾವಳಿಯಲ್ಲಿ ಅದೆಷ್ಟೋ ಆಸ್ಪತ್ರೆಗಳಿದ್ದು, ದಿನದಿಂದ ದಿನಕ್ಕೆ ರಕ್ತದ ಬೇಡಿಕೆ ಜಾಸ್ತಿಯಾಗುತ್ತಿರುವುದನ್ನು ಮನಗಂಡು ಸಾಮಾಜಿಕ ಜಾಲತಾಣಗಳ ಮೂಲಕ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಎಂಬ ಸಂಸ್ಥೆಯನ್ನು ನಾನು ಮತ್ತು ನಾಸಿರ್ ಉಳಾಯಿಬೆಟ್ಟು ಮತ್ತಿತರ ನಮ್ಮ ಆತ್ಮೀಯರೊಂದಿಗೆ ಸೇರಿ ಪ್ರಾರಂಭಿಸಿದ್ದು, ಇಂದು ಅದೆಷ್ಟೋ ರೋಗಿಗಳ ಪಾಲಿಗೆ ಆಶಾಕಿರಣವಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ನಮ್ಮ ಸಂಸ್ಥೆಯನ್ನು ಉತ್ತುಂಗಕ್ಕೇರಲು ಸಹಕರಿಸಿದ ನಮ್ಮ ಎಲ್ಲಾ ಕಾರ್ಯನಿರ್ವಾಹಕರಿಗೂ ನಮ್ಮೆಂದಿಗೆ ಕೈಜೋಡಿಸಿದ ರಕ್ತ ದಾನಿಗಳಿಗೂ, ಸಂಘಸಂಸ್ಥೆಗಳಿಗೂ ತುಂಬು ಹೃದಯದ ಕೃತಜ್ಞತೆಗಳು.

-ನಿಸಾರ್ ಉಳ್ಳಾಲ, ಸ್ಥಾಪಕರು, ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ

2 ವರ್ಷಗಳಲ್ಲಿ ದಾಖಲೆಯ ರಕ್ತ ಸಂಗ್ರ

 ಬ್ಲಡ್ ಹೆಲ್ಪ್‌ಲೈನ್ ಈವರೆಗೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸುಮಾರು 59 ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದು, 4,225 ಯೂನಿಟ್ ರಕ್ತ ಸಂಗ್ರಹಿಸಿ, ರಕ್ತನಿಧಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಪ್ರತಿನಿತ್ಯ ರಕ್ತ ಆವಶ್ಯವಿರುವ ಮನವಿಯನ್ನು ಕೂಡಾ ಸ್ವೀಕರಿಸಿ ದಾನಿಗಳನ್ನು ಹುಡುಕಿ ಆ ಮೂಲಕ ಸಾವಿರಕ್ಕೂ ಅಧಿಕ ಯೂನಿಟ್ ರಕ್ತವನ್ನು ಅಗತ್ಯವಿರುವ ರೋಗಿಗಳಿಗೆ ಪೊರೈಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ನಿರ್ವಾಹಕರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ರಕ್ತಕ್ಕೆ ಸಂಬಂಧಿಸಿದ ವಿಚಾರಗಳ ಚರ್ಚೆ, ರಕ್ತದ ಬೇಡಿಕೆ, ಸ್ಪಂದನೆ ಮುಂತಾದವು ಸಂಸ್ಥೆಯ ಶಿಸ್ತನ್ನು ತೋರ್ಪಡಿಸುತ್ತದೆ.

ಬ್ಲಡ್ ಹೆಲ್ಪ್‌ಲೈನ್ ಸಂಸ್ಥೆಯೂ ತುರ್ತು ಸಂದರ್ಭದಲ್ಲಿ ಬೇಕಾದವರಿಗೆ ಆಯಾ ಆಸ್ಪತ್ರೆಗೆ ಆಯಾ ಗುಂಪಿನ ರಕ್ತವನ್ನು ತಲುಪಿಸಿಕೊಡುವಲ್ಲಿ ಯಶಸ್ವಿ ಯಾಗುತ್ತಿದೆ. ಸಮಾಜಕ್ಕೆ ಉತ್ತಮ ಸೇವೆ ನೀಡು ತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ.

-ಡಾ. ಇ.ಕೆ.ಎ.ಸಿದ್ದೀಕ್ , ಅಡ್ಡೂರು.

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News