ಎನ್ಆರ್ ಸಿ ಪ್ರಕ್ರಿಯೆಯನ್ನು ನಾಶಗೈಯ್ಯಲು ಪ್ರಯತ್ನಿಸುತ್ತಿದ್ದೀರಿ: ಸರಕಾರಕ್ಕೆ ಸುಪ್ರೀಂ ತರಾಟೆ

Update: 2019-02-05 11:53 GMT

ಹೊಸದಿಲ್ಲಿ, ಫೆ.5: ಲೋಕಸಭಾ ಚುನಾವಣೆಗಳ ನೆಪವೊಡ್ಡಿ ಅಸ್ಸಾಂ ರಾಜ್ಯದಲ್ಲಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಕಾರ್ಯ  ಸುಸೂತ್ರವಾಗಿ ನೆರವೇರಲು ನಿಯೋಜಿಸಲಾಗಿರುವ ಕೇಂದ್ರೀಯ ಭದ್ರತಾ ಪಡೆಗಳನ್ನು ವಾಪಸ್ ಪಡೆಯಲು ಕೇಂದ್ರ ಗೃಹ ಸಚಿವಾಲಯ ಮಾಡಿರುವ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.

“ಎನ್‍ಆರ್ ಸಿ ಪ್ರಕ್ರಿಯೆ ಮುಂದುವರಿಯುವುದು ಸಚಿವಾಲಯಕ್ಕೆ ಬೇಕಿಲ್ಲವೆಂದು ಕಾಣುತ್ತದೆ. ಪ್ರಕ್ರಿಯೆಯನ್ನು ನಾಶಗೈಯ್ಯಲು ಅವರು ಪ್ರಯತ್ನಿಸುತ್ತಿರುವಂತಿದೆ'' ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಎನ್‍ಆರ್ ಸಿ  ಪ್ರಕ್ರಿಯೆಯನ್ನು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕದಿಂದ ಮತದಾನದ ದಿನದ ತನಕ ಸ್ಥಗಿತಗೊಳಿಸಬೇಕಾದೀತೆಂದು ಅಸ್ಸಾಂ ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದಾಗ ಮುಖ್ಯ ನ್ಯಾಯಮೂರ್ತಿ ಮೇಲಿನಂತೆ ಹೇಳಿದ್ದಾರೆ.

ಕೇಂದ್ರದ ಪರ ಹಾಜರಿದ್ದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮಾತನಾಡುತ್ತಾ ರಾಜ್ಯದಲ್ಲಿರುವ ಭದ್ರತಾ ಪಡೆಗಳನ್ನು ವಾಪಸ್ ಪಡೆದು ನಂತರ ಮರು ನಿಯೋಜಿಸಬೇಕಾಗಿರುವುದರಿಂದ ಎನ್‍ಆರ್ ಸಿ ಪ್ರಕ್ರಿಯೆಯನ್ನು ಎರಡು ವಾರಗಳ ಕಾಲ ವಿಸ್ತರಿಸಬೇಕಾದೀತೆಂದು ಹೇಳಿದರು.

ಆದರೆ ಈ ಮನವಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ,  ಅಸ್ಸಾಂ ರಾಜ್ಯದ ಅಂತಿಮ ಎನ್‍ಆರ್‍ಸಿ ಪ್ರಕಟ ದಿನಾಂಕವನ್ನು ಜುಲೈ 31ರ ನಂತರ ವಿಸ್ತರಿಸಲಾಗುವುದಿಲ್ಲ ಎಂದರು.

``ಸರಕಾರ ಎನ್‍ಆರ್ ಸಿ ಪ್ರಕ್ರಿಯೆಯಲ್ಲಿ ಸಹಕರಿಸುತ್ತಿಲ್ಲ. ಮನಸ್ಸಿದ್ದರೆ ಅದನ್ನು ಪೂರ್ತಿಗೊಳಿಸಲು ಸಾವಿರದೊಂದು ಮಾರ್ಗಗಳಿವೆ, ಗೃಹ ಕಾರ್ಯದರ್ಶಿಗೆ ಸಮನ್ಸ್ ಕಳುಹಿಸುವುದು ನಿಮಗೆ ಬೇಕಿದೆಯೇ?,'' ಎಂದು ಮುಖ್ಯ ನ್ಯಾಯಮೂರ್ತಿ ಗೊಗೊಯಿ ಪ್ರಶ್ನಿಸಿದರು.

ಸದ್ಯ 50,000ಕ್ಕಿಂತಲೂ ಅಧಿಕ ಸರಕಾರಿ ಸಿಬ್ಬಂದಿ ಈ ಕಾರ್ಯದಲ್ಲಿ ಕೈಜೋಡಿಸಿರುವುದರಿಂದ ರಾಜ್ಯದಲ್ಲಿ ಚುನಾವಣೆ ಕರ್ತವ್ಯಗಳನ್ನು ನಿಭಾಯಿಸುವುದು ದೊಡ್ಡ ಸವಾಲಿನ ಕೆಲಸವಾಗಲಿದೆ. ಎನ್‍ಆರ್‍ಸಿ ಪ್ರಕ್ರಿಯೆಗೆ ತಡೆಯಾಗದಂತೆ ಕೆಲ ಸರಕಾರಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಬೇಕೆಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News