ವಿರೋಧ ಅಭಿಯಾನಕ್ಕೆ ಇಬ್ಬರು ಭಾರತ ಮೂಲದ ಮಹಿಳೆಯರ ನೇತೃತ್ವ
ವಾಶಿಂಗ್ಟನ್, ಫೆ. 5: ಕೊಲಂಬಿಯ ಜಿಲ್ಲಾ ಸರ್ಕೀಟ್‌ನ ಪ್ರಭಾವಿ ಮೇಲ್ಮನವಿ ನ್ಯಾಯಾಲಯಕ್ಕೆ ಭಾರತ ಮೂಲದ ನಿಯೋಮಿ ರಾವ್‌ರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಮ ನಿರ್ದೇಶನ ಮಾಡಿರುವುದನ್ನು ವಿರೋಧಿಸುವ ಡೆಮಾಕ್ರಟಿಕ್ ಪಕ್ಷದ ಅಭಿಯಾನದ ನೇತೃತ್ವವನ್ನು ಇಬ್ಬರು ಭಾರತೀಯ-ಅಮೆರಿಕನ್ ಮಹಿಳೆಯರು ವಹಿಸಿಕೊಂಡಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೆ ಅವರು ಕೊಟ್ಟಿರುವ ನೆವಗಳು ಮತ್ತು ನಾಗರಿಕ ಮತ್ತು ಮಾನವಹಕ್ಕುಗಳಿಗೆ ಅವರು ಹೊಂದಿರುವ ‘ವಿರೋಧ’ವನ್ನು ಈ ಅಭಿಯಾನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.
ಶ್ವೇತಭವನದಲ್ಲಿ ನವೆಂಬರ್‌ನಲ್ಲಿ ದೀಪಾವಳಿ ಆಚರಿಸಿದ ಸಂದರ್ಭದಲ್ಲಿ, ನಿಯೋಮಿ ರಾವ್‌ರ ನಾಮ ನಿರ್ದೇಶನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಅಕ್ಟೋಬರ್‌ನಲ್ಲಿ ನ್ಯಾಯಮೂರ್ತಿ ಬ್ರೆಟ್ ಕ್ಯಾವನಾ ಪ್ರಮಾಣವಚನ ಸ್ವೀಕರಿಸಿದ ಬಳಿಕ ತೆರವಾದ ಸ್ಥಾನಕ್ಕೆ ನಿಯೋಮಿಯನ್ನು ನಾಮನಿರ್ದೇಶನ ಮಾಡಲಾಗಿತ್ತು.
‘‘ಲೈಂಗಿಕ ದೌರ್ಜನ್ಯಕ್ಕೆ ನಿಯೋಮಿ ರಾವ್ ನೆವಗಳನ್ನು ಕೊಟ್ಟಿದ್ದಾರೆ. ಜನನ ಆರೋಗ್ಯ ಸೇವೆಗೆ ಮಹಿಳೆಯರಿಗೆ ಅವಕಾಶ ನಿರಾಕರಿಸಿದ್ದಾರೆ ಹಾಗೂ ಎಲ್ ಜಿಬಿಟಿಕ್ಯೂ (ತೃತೀಯ ಲಿಂಗಿ) ಸದಸ್ಯರಿಗೆ ಆರೋಗ್ಯ ಸೇವೆ ನೀಡುವುದನ್ನು ನಿರಾಕರಿಸುವ ಆರೋಗ್ಯ ರಕ್ಷಣೆ ಪೂರೈಕೆದಾರರಿಗೆ ಅನುಮೋದನೆ ನೀಡಲಿದ್ದಾರೆ’’ ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾದ ಮೊದಲ ಭಾರತೀಯ-ಅಮೆರಿಕನ್ ಮಹಿಳೆ ಪ್ರಮೀಳಾ ಜಯಪಾಲ್ ಹೇಳಿದ್ದಾರೆ.
ಅಮೆರಿಕದ ಖ್ಯಾತ ಭಾರತೀಯ-ಅಮೆರಿಕನ್ ವಕೀಲೆ ವನಿತಾ ಗುಪ್ತ ಇದಕ್ಕೆ ದನಿಗೂಡಿಸಿದ್ದಾರೆ.