ನಕಲಿ ವಿವಿ ಹಗರಣ: ಭಾರತದ ವಿವರಣೆಯನ್ನು ಒಪ್ಪದ ಅಮೆರಿಕ

Update: 2019-02-05 15:17 GMT

ವಾಶಿಂಗ್ಟನ್, ಫೆ. 5: ಅಮೆರಿಕದ ನಕಲಿ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದುಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ‘ಮೋಸ ಹೋಗಿರುವ ಸಾಧ್ಯತೆಯಿದೆ’ ಹಾಗೂ ಅವರು ‘ಪಿತೂರಿಯ ಬಲಿಪಶುಗಳಾಗಿರಬಹುದು’ ಎಂಬ ಭಾರತದ ವಾದವನ್ನು ಅಮೆರಿಕ ತಿರಸ್ಕರಿಸಿದೆ. ತಾವು ಅಪರಾಧ ಮಾಡುತ್ತಿದ್ದೇವೆ ಎನ್ನುವುದು ಬಂಧಿತ ಭಾರತೀಯರಿಗೆ ಗೊತ್ತಿತ್ತು ಎಂದು ಅದು ಹೇಳಿದೆ.

ಕೆಲವು ಭಾರತೀಯರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಆದರೆ, ಹೆಚ್ಚಿನವರು ಅಮೆರಿಕದ ಸುಪರ್ದಿಯಲ್ಲಿದ್ದಾರೆ. ನಕಲಿ ವಿಶ್ವವಿದ್ಯಾನಿಲಯದಲ್ಲಿ ನೋಂದಾಯಿಸಿಕೊಂಡಿರುವುದಕ್ಕಾಗಿ ಅವರು ಗಡಿಪಾರು ಎದುರಿಸುತ್ತಿದ್ದಾರೆ.

ವಿದ್ಯಾರ್ಥಿ ವೀಸಾಗಳನ್ನು ದುರುಪಯೋಗಪಡಿಸುವವರನ್ನು ಪತ್ತೆಹಚ್ಚುವುದಕ್ಕಾಗಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಮಿಶಿಗನ್ ರಾಜ್ಯದಲ್ಲಿ ‘ಫಾರ್ಮಿಂಗ್ಟನ್ ವಿಶ್ವವಿದ್ಯಾನಿಲಯ’ ಎಂಬ ನಕಲಿ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸಿರುವುದನ್ನು ಸ್ಮರಿಸಬಹುದಾಗಿದೆ.

ಈ ವಿಶ್ವವಿದ್ಯಾನಿಲಯಕ್ಕೆ ಕಮಿಶನ್ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುತ್ತಿದ್ದ ಆರೋಪದಲ್ಲಿ ಭಾರತ ಮೂಲದ 8 ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.

ವಿದ್ಯಾರ್ಥಿಗಳ ಬಂಧನಕ್ಕೆ ಭಾರತ ಕಟುವಾಗಿ ಪ್ರತಿಕ್ರಿಯಿಸಿದೆ. ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯುವಂತೆ ಭಾರತೀಯ ವಿದ್ಯಾರ್ಥಿಗಳನ್ನು ವಂಚಿಸಿರಬಹುದು ಎಂಬುದಾಗಿ ಹೊಸದಿಲ್ಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಸಲ್ಲಿಸಿರುವ ಹೇಳಿಕೆಯೊಂದರಲ್ಲಿ ಅದು ಹೇಳಿದೆ. ಹಾಗಾಗಿ, ಅವರನ್ನು ‘ನೇಮಕಾತಿದಾರ’ರಿಗಿಂತ ಭಿನ್ನವಾಗಿ ಪರಿಗಣಿಸಬೇಕು ಎಂದು ಭಾರತ ಒತ್ತಾಯಿಸಿದೆ.

‘ಅಪರಾಧ ಮಾಡುತ್ತಿದ್ದೇವೆ ಎನ್ನುವುದು ಅವರಿಗೆ ಗೊತ್ತಿತ್ತು’

‘‘ಈ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರಿಲ್ಲ ಹಾಗೂ ತರಗತಿಗಳಿಲ್ಲ ಎನ್ನುವುದು ಈ ಯೋಜನೆಯಲ್ಲಿ ಶಾಮೀಲಾದ ಎಲ್ಲರಿಗೂ ತಿಳಿದಿತ್ತು. ಅಮೆರಿಕದಲ್ಲಿ ವಂಚನೆಯಿಂದ ಉಳಿಯುವುದಕ್ಕಾಗಿ ತಾವು ಅಪರಾಧ ಮಾಡುತ್ತಿದ್ದೇವೆ ಎನ್ನುವುದೂ ಅವರಿಗೆ ಗೊತ್ತಿತ್ತು’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಸೋಮವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News