×
Ad

ರಕ್ತದಾನ ಮಾಡಿ ಎನ್ ಕೌಂಟರ್ ನಲ್ಲಿ ಗಾಯಗೊಂಡಿದ್ದ ನಕ್ಸಲೀಯನ ಜೀವ ಉಳಿಸಿದ ಯೋಧ !

Update: 2019-02-05 22:15 IST

ಹೊಸದಿಲ್ಲಿ, ಫೆ. 5: ಜಾರ್ಖಂಡ್‌ನಲ್ಲಿ ನಕ್ಸಲ್ ಒಬ್ಬನಿಗೆ ರಕ್ತದಾನ ಮಾಡಿ ಜೀವ ಉಳಿಸುವ ಮೂಲಕ ಸಿಆರ್‌ಪಿಎಫ್ ‌ನ ಯೋಧ ರಾಜ್‌ಕಮಲ್ ಮಾನವೀಯತೆ ಮೆರೆದಿದ್ದಾರೆ.

ನಕ್ಸಲ್ ವಿರೋಧಿ ಘಟಕ ಕೋಬ್ರಾ ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲೀಯ ಸೋಮಪೂರ್ತಿ ಗಾಯಗೊಂಡಿದ್ದ. ಅವನಿಗೆ 133 ಬೆಟಾಲಿಯನ್‌ನ ರಾಜ್ ಕಮಲ್ ರಕ್ತ ದಾನ ಮಾಡಿ ಜೀವ ಉಳಿಸಿದ್ದಾರೆ. ಖುಂತಿ ಹಾಗೂ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಗಳ ಗಡಿಯಲ್ಲಿ 209 ಕೋಬ್ರಾ ಜನವರಿ 29ರಂದು ನಡೆಸಿದ ಎನ್‌ಕೌಂಟರ್ ಸಂದರ್ಭ ಸೋಮಪೂರ್ತಿ ಗಂಭೀರ ಗಾಯಗೊಂಡಿದ್ದ. ಆದರೆ, ಭದ್ರತಾ ಪಡೆಯ ಯೋಧರೇ ಅವನನ್ನು ಅಲ್ಲಿಂದ ಆಸ್ಪತ್ರೆಗೆ ದಾಖಲಿಸಿದರು. ಈ ಎನ್‌ಕೌಂಟರ್‌ನಲ್ಲಿ ಐವರು ನಕ್ಸಲೀಯರು ಹತರಾಗಿದ್ದಾರೆ ಹಾಗೂ ಸೋಮಪೂರ್ತಿ ಸಹಿತ ಇಬ್ಬರು ನಕ್ಸಲೀಯರು ಗಾಯಗೊಂಡಿದ್ದಾರೆ. ಎರಡು ಎ.ಕೆ. 47, ಎರಡು .303 ರೈಫಲ್‌ಗಳು ಹಾಗೂ 5 ಪಿಸ್ತೂಲ್‌ಗಳು ಎನ್‌ಕೌಂಟರ್ ಸ್ಥಳದಲ್ಲಿ ಪತ್ತೆಯಾಗಿವೆ.

ಗಾಯಗೊಂಡಿದ್ದ ಸೋಮಪೂರ್ತಿಯನ್ನು ಅನಂತರ ಜಾರ್ಖಂಡ್ ಪೊಲೀಸರು ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ನಲ್ಲಿ ದಾಖಲಿಸಿದರು. ‘‘ನಿನ್ನೆ (ಫೆಬ್ರವರಿ 4) ನಮಗೆ ಆಸ್ಪತ್ರೆಯಿಂದ ಕರೆಯೊಂದು ಬಂದಿತ್ತು. ಸೋಮಪೂರ್ತಿಗೆ ಬಿ ಪಾಸಿಟಿವ್ ರಕ್ತ ಬೇಕು ಎಂದು ಮನವಿ ಮಾಡಲಾಗಿತ್ತು. ಕೂಡಲೇ ನಮ್ಮ ಕಾನ್ಸ್‌ಟೆಬಲ್ ರಾಜ್‌ಕಮಲ್ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು’’ ಎಂದು ಜಾರ್ಖಂಡ್ ವಲಯ ಸಿಆರ್‌ಪಿಎಫ್ ಐಜಿಪಿ ಸಂಜಯ್ ಆನಂದಂ ಲತ್ಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News