ಮಲ್ಯ ಆಸ್ತಿಗಳನ್ನು ಬ್ಯಾಂಕ್‌ಗಳು ಪಡೆಯಲು ಆಕ್ಷೇಪವಿಲ್ಲ: ಜಾರಿ ನಿರ್ದೇಶನಾಲಯ
ಮುಂಬೈ,ಫೆ.5: ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯರ ಆಸ್ತಿಗಳನ್ನು ಬ್ಯಾಂಕ್‌ಗಳು ಪಡೆಯಲು ಯಾವುದೇ ಆಕ್ಷೇಪವಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ ಹೀಗೆ ಪಡೆದ ಹಣವನ್ನು ಭವಿಷ್ಯದಲ್ಲಿ ನ್ಯಾಯಾಲಯಕ್ಕೆ ಮರಳಿಸುವ ಮುಚ್ಚಳಿಕೆಯನ್ನು ಈ ಬ್ಯಾಂಕ್‌ಗಳು ನೀಡಬೇಕೆಂದು ಇಡಿ ತಿಳಿಸಿದೆ.
9,000 ಕೋಟಿ ರೂ. ಸಾಲ ಬಾಕಿಯಿಟ್ಟಿರುವ ಮಲ್ಯರ ಆಸ್ತಿಯನ್ನು ವಿಲೇವಾರಿ ಮಾಡಲು ಅವಕಾಶ ನೀಡಬೇಕೆಂದು ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಸಮೂಹ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಇಡಿ ತನ್ನ ಅಫಿದಾವಿತ್ ಸಲ್ಲಿಸಿದೆ. ಬ್ಯಾಂಕ್‌ಗಳ ಸಮೂಹ ಮಾಡಿರುವ ಮನವಿಯನ್ನು ಪುರಸ್ಕರಿವುದು ನ್ಯಾಯಾಲಯಕ್ಕೆ ಬಿಟ್ಟಿದ್ದು. ಒಂದು ವೇಳೆ, ಮಲ್ಯರ ಆಸ್ತಿಯನ್ನು ವಿಲೇವಾರಿ ಮಾಡಲು ಬ್ಯಾಂಕ್‌ಗಳಿಗೆ ಅನುಮತಿ ನೀಡಿದರೆ ಹಾಗೆ ಮಾಡುವುದಕ್ಕೂ ಮೊದಲು ಬ್ಯಾಂಕ್‌ಗಳ ಸಮೂಹದಿಂದ ಮುಚ್ಚಳಿಕೆ ಪತ್ರವನ್ನು ಪಡೆದುಕೊಳ್ಳಬೇಕು ಎಂದು ಇಡಿ ಮನವಿ ಮಾಡಿದೆ. ಮನವಿ ಸಲ್ಲಿಸಿದ ಬ್ಯಾಂಕ್‌ಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಸಾರ್ವಜನಿಕ ಬ್ಯಾಂಕ್‌ಗಳು. ಹಾಗಾಗಿ ಆಸ್ತಿಯ ವಿಲವಾರಿ ಸಾರ್ವಜನಿಕರ ಹಿತಾಸಕ್ತಿಯ ಪರವಾಗಿರಲಿದೆ ಎಂದು ಇಡಿ ತಿಳಿಸಿದೆ.