×
Ad

ಕುತೂಹಲ ಘಟ್ಟದಲ್ಲಿ ರಣಜಿ ಫೈನಲ್

Update: 2019-02-05 23:25 IST

►ಸ್ನೆಲ್ ಪಟೇಲ್ ಶತಕ

►ವಿದರ್ಭ ದ್ವಿತೀಯ ಇನಿಂಗ್ಸ್‌ 55/2

ನಾಗ್ಪುರ, ಫೆ.5: ಸೌರಾಷ್ಟ್ರ ಬಾಲಂಗೋಚಿ ದಾಂಡಿಗರ ಗಮನಾರ್ಹ ಪ್ರದರ್ಶನದ ನೆರವಿನಿಂದ ಸೌರಾಷ್ಟ್ರ ಹಾಗೂ ವಿದರ್ಭಗಳ ಮಧ್ಯೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಸೌರಾಷ್ಟ್ರ ತಂಡ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 307 ರನ್ ಗಳಿಸಿದೆ. ಆ ಮೂಲಕ ವಿದರ್ಭ ಮೊತ್ತಕ್ಕಿಂತ ಕೇವಲ 5 ರನ್ ಹಿನ್ನಡೆ ಅನುಭವಿಸಿದೆ. ಪ್ರತಿಯಾಗಿ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ವಿದರ್ಭ 55 ರನ್‌ಗೆ 2 ವಿಕೆಟ್ ಕಳೆದುಕೊಂಡು ಒಟ್ಟಾರೆ 60 ರನ್‌ಗಳ ಮುನ್ನಡೆ ಗಳಿಸಿದೆ. ಇಲ್ಲಿಯ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಮಂಗಳವಾರ 5 ವಿಕೆಟ್‌ಗೆ 158 ರನ್‌ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಸೌರಾಷ್ಟ್ರ ಒಂದು ಹಂತದಲ್ಲಿ 184 ರನ್‌ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯ ಮೂರು ವಿಕೆಟ್‌ಗಳಿಂದ 123 ರನ್ ಸೇರಿಸಿದ ಪ್ರವಾಸಿ ಪಡೆ ವಿದರ್ಭಕ್ಕೆ ಸುಲಭ ತುತ್ತಾಗುವುದನ್ನು ತಪ್ಪಿಸಿಕೊಂಡಿತು.

ನಾಯಕನ ಜವಾಬ್ದಾರಿ ಅರಿತು ಬ್ಯಾಟಿಂಗ್‌ನಲ್ಲೂ ಮಿಂಚಿದ ಜೈದೇವ್ ಉನಾದ್ಕತ್ 46 ರನ್ ಗಳಿಸಿದರೆ ಧರ್ಮೇಂದ್ರಸಿಂಹ(23), ಮಕ್ವಾನಾ(27) ಚೇತನ್ ಸಕಾರಿಯಾ(ಅಜೇಯ 28) ಜೈದೇವ್‌ಗೆ ನೆರವಾದರು.

ಈ ಋತುವಿನಲ್ಲಿ ಪ್ರಥಮ ಶತಕದ ಸಿಹಿ ಕಂಡ ಸ್ನೆಲ್ ಪಟೇಲ್(102) ದಿನದ ಆರಂಭದಲ್ಲಿ ಉಮೇಶ್ ಯಾದವ್‌ಗೆ(59ಕ್ಕೆ 1)ವಿಕೆಟ್ ಒಪ್ಪಿಸಿದರು. ಪ್ರೇರಕ್ ಮಂಕಡ್(21) ಆದಿತ್ಯ ಸರ್ವಾಟೆಗೆ ಬಲಿಯಾದರು. ಧರ್ಮೇಂದ್ರಸಿಂಹ ಹಾಗೂ ಮಕ್ವಾನಾ 48 ರನ್ ಜೊತೆಯಾಟ ನಡೆಸಿದರೆ, ಕೊನೆಯ ವಿಕೆಟ್ ಜೊತೆಯಾಟದಲ್ಲಿ ಉನಾದ್ಕತ್ ಹಾಗೂ ಸಕಾರಿಯಾ 60 ರನ್ ಸೇರಿಸಿದರು.

ವಿದರ್ಭ ಪರ ಸರ್ವಾಟೆ 5 ವಿಕೆಟ್ ಗೊಂಚಲು ಪಡೆದು ಮಿಂಚಿದರೆ, 4 ವಿಕೆಟ್ ಪಡೆದ ಅಕ್ಷಯ್ ವಾಖರೆ, ಸರ್ವಾಟೆಗೆ ಉತ್ತಮ ಸಾಥ್ ನೀಡಿದರು. ಒಂದು ಹಂತದಲ್ಲಿ ಸೌರಾಷ್ಟ್ರ ಇನಿಂಗ್ಸ್ ಮುನ್ನಡೆ ಸಾಧಿಸಿಯೇ ಬಿಟ್ಟಿತೆಂಬ ನಿರೀಕ್ಷೆ ಇತ್ತು. ವಾಖರೆ ಅವರು ಉನಾದ್ಕತ್‌ಗೆ ಪೆವಿಲಿಯನ್ ಹಾದಿ ತೋರಿಸಿ ಸೌರಾಷ್ಟ್ರದ ಮುನ್ನಡೆಯ ಕನಸನ್ನು ಭಗ್ನಗೊಳಿಸಿದರು.

ಅಲ್ಪ ಇನಿಂಗ್ಸ್ ಮುನ್ನಡೆ ಸಾಧಿಸಿದ ಸಮಾಧಾನದಲ್ಲಿ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡ ನಾಯಕ ಫೈಝ್ ಫಝಲ್(10) ಹಾಗೂ ಸಂಜಯ್ ರಾಮಸ್ವಾಮಿ(16) ವಿಕೆಟ್‌ಗಳನ್ನು ಕಳೆದುಕೊಂಡಿದೆ. ಧರ್ಮೇಂದ್ರ ಸಿಂಹ ಉಭಯ ಆಟಗಾರರನ್ನು ಪೆವಿಲಿಯನ್‌ಗೆ ಅಟ್ಟಿದರು.

ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಇಳಿದ, ಈ ಹಿಂದೆ ಕರ್ನಾಟಕ ತಂಡದಲ್ಲಿದ್ದ ಆಟಗಾರ ಗಣೇಶ್ ಸತೀಶ್ (ಅಜೇಯ 24) ಹೆಚ್ಚಿನ ಕುಸಿತವಾಗದಂತೆ ತಡೆದಿದ್ದಾರೆ. ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಹಿರಿಯ ಆಟಗಾರ ವಸೀಂ ಜಾಫರ್ (ಅಜೇಯ 5) ಜೊತೆಗೂಡಿದ್ದಾರೆ. 55 ರನ್‌ಗೆ 2 ವಿಕೆಟ್ ಕಳೆದುಕೊಂಡಿರುವ ವಿದರ್ಭ ಕೈಯಲ್ಲಿ ಇನ್ನೂ ಎಂಟು ವಿಕೆಟ್‌ಗಳಿವೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು, ಪಂದ್ಯ ಡ್ರಾಗೊಂಡರೆ ಪ್ರಥಮ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ವಿದರ್ಭವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News