ಎಲ್ಗಾರ್ ಪರಿಷದ್ ಪ್ರಕರಣ: ಜಾಮೀನಿಗೆ ಸುಧಾ ಭಾರದ್ವಾಜ್ ಅರ್ಜಿ
ಮುಂಬೈ, ಫೆ.6: ಭೀಮಾ ಕೋರೆಗಾಂವ್‌ನಲ್ಲಿ ನಡೆದ ಎಲ್ಗಾರ್ ಪರಿಷದ್ ಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ಮಹಿಳಾ ನ್ಯಾಯವಾದಿ ಸುಧಾ ಭಾರದ್ವಾಜ್ ಜಾಮೀನು ಕೋರಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಾನು ಹಾಕಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಪುಣೆ ನ್ಯಾಯಾಲಯದ ನಿರ್ಧಾರವನ್ನು ತನ್ನ ವಕೀಲ ಯುಗ್ ಚೌಧರಿ ಮೂಲಕ ಭಾರದ್ವಾಜ್ ಪ್ರಶ್ನಿಸಿದ್ದಾರೆ. ಈ ಮನವಿಯ ವಿಚಾರಣೆಯನ್ನು ಬುಧವಾರ ನ್ಯಾಯಾಧೀಶ ಎನ್.ಡಬ್ಲ್ಯೂ ಸಂಬ್ರೆ ಕೈಗೆತ್ತಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪುರಾವೆಗಳೆಂದು ಪುಣೆ ಪೊಲೀಸರು ಒದಗಿಸಿದ್ದ ನಾಲ್ಕು ಪತ್ರಗಳ ಆಧಾರದಲ್ಲಿ ಪುಣೆ ನ್ಯಾಯಾಲಯ ಭಾರದ್ವಾಜ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಭಾರತೀಯ ಪುರಾವೆ ಕಾಯ್ದೆಯ ಪ್ರಕಾರ ಪತ್ರಗಳನ್ನು ಒಪ್ಪಬಹುದಾದ ಸಾಕ್ಷಿಗಳೆಂದು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಚೌಧರಿ ತಿಳಿಸಿದ್ದಾರೆ. ಮನವಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಫೆಬ್ರವರಿ 8ಕ್ಕೆ ಮುಂದೂಡಿದೆ.