ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣದಲ್ಲಿ 50,000 ಪ್ರಕರಣಗಳು ವಿಚಾರಣೆಗೆ ಬಾಕಿ: ಸರಕಾರ

Update: 2019-02-06 15:14 GMT

ಹೊಸದಿಲ್ಲಿ,ಫೆ.6: ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣ (ಸಿಎಟಿ)ದ ವಿವಿಧ ಪೀಠಗಳಲ್ಲಿ 50,000ಕ್ಕೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ, ಇವುಗಳಲ್ಲಿ ಸುಮಾರು 4,100 ಪ್ರಕರಣಗಳು ಐದಕ್ಕಿಂತಲೂ ಹೆಚ್ಚು ವರ್ಷಗಳಿಂದ ವಿಚಾರಣೆಗೆ ಕಾಯುತ್ತಿವೆ ಎಂದು ಕೇಂದ್ರ ಸಿಬ್ಬಂದಿ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಬುಧವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಉದ್ಯೋಗಿಗಳ ತಕರಾರು ಮತ್ತು ದೂರುಗಳನ್ನು ತೀರ್ಮಾನಿಸುವ ಜವಾಬ್ದಾರಿಯನ್ನು ನ್ಯಾಯಾಧೀಕರಣಕ್ಕೆ ನೀಡಲಾಗಿದೆ. 2018 ಡಿಸೆಂಬರ್ 31ರಂತೆ ದೇಶಾದ್ಯಂತವಿರುವ ಸಿಎಟಿಯ ಹದಿನೇಳು ಪೀಠಗಳಲ್ಲಿ ಒಟ್ಟಾರೆ 50,053 ಪ್ರಕರಣಗಳು ಬಾಕಿಯಿವೆ ಎಂದು ಸಚಿವರು ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಈ ಪೈಕಿ 4,141 ಪ್ರಕರಣಗಳು ಐದಕ್ಕಿಂತ ಹೆಚ್ಚು ವರ್ಷಗಳಿಂದ ವಿಚಾರಣೆಗೆ ಬಾಕಿಯಿದ್ದರೆ, 10,263 ಪ್ರಕರಣಗಳು ಮೂರರಿಂದ ಐದು ವರ್ಷಗಳಿಂದ ಬಾಕಿಯಿವೆ.

9,006 ಪ್ರಕರಣಗಳು ಎರಡರಿಂದ ಮೂರು ವರ್ಷಗಳಿಂದ ವಿಚಾರಣೆಗಾಗಿ ಕಾಯುತ್ತಿದ್ದರೆ, 10,958 ಪ್ರಕರಣಗಳು ಒಂದರಿಂದ ಎರಡು ಮತ್ತು 15,685 ಪ್ರಕರಣಗಳು ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯದ್ದಾಗಿವೆ ಎಂದು ಸಚಿವರು ತಿಳಿಸಿದ್ದಾರೆ. ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯುಳಿದಿರುವುದನ್ನು ಗಮನಿಸಿ 1985ರಲ್ಲಿ ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣವನ್ನು ರಚಿಸಲಾಯಿತು. ದೇಶಾದ್ಯಂತ 17 ಪೀಠಗಳನ್ನು ಹೊಂದಿರುವ ನ್ಯಾಯಾಧೀಕರಣ ಕೇಂದ್ರ ಸರಕಾರದ ಉದ್ಯೋಗಿಗಳ ದೂರುದುಮ್ಮಾನಗಳನ್ನು ಆಲಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News