ಚೀನಾ ಮಾಡುತ್ತಿರುವ ಅಮೆರಿಕದ ಉದ್ಯೋಗ, ಸಂಪತ್ತಿನ ಕಳ್ಳತನಕ್ಕೆ ಕೊನೆ: ಟ್ರಂಪ್

Update: 2019-02-06 16:30 GMT

ವಾಶಿಂಗ್ಟನ್, ಫೆ. 6: ಚೀನಾದೊಂದಿಗೆ ಅಮೆರಿಕ ನಡೆಸುತ್ತಿರುವ ಕಠಿಣ ವ್ಯಾಪಾರ ಮಾತುಕತೆಗಳು, ಚೀನಾ ಮಾಡುತ್ತಿರುವ ಅಮೆರಿಕದ ಉದ್ಯೋಗಗಳು ಮತ್ತು ಸಂಪತ್ತಿನ ಕಳ್ಳತನವನ್ನು ಕೊನೆಗೊಳಿಸುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

‘‘ವರ್ಷಗಳ ಕಾಲ ನಮ್ಮ ಉದ್ದಿಮೆಗಳ ಮೇಲೆ ಕಣ್ಣು ಹಾಕಿದ ಬಳಿಕ, ನಮ್ಮ ಬೌದ್ಧಿಕ ಆಸ್ತಿಯನ್ನು ಕದ್ದ ಬಳಿಕ, ಅಮೆರಿಕದ ಉದ್ಯೋಗಗಳು ಮತ್ತು ಸಂಪತ್ತಿನ ಕಳ್ಳತನವನ್ನು ಕೊನೆಗೊಳಿಸಿದ್ದೇವೆ ಎಂಬುದಾಗಿ ನಾವು ಚೀನಾಕ್ಕೆ ಸ್ಪಷ್ಟಪಡಿಸುತ್ತಿದ್ದೇವೆ’’ ಎಂದು ತನ್ನ ವಾರ್ಷಿಕ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣದಲ್ಲಿ ಅವರು ಹೇಳಿದರು.

ಜಗತ್ತಿನ ಎರಡು ಅತಿ ದೊಡ್ಡ ಆರ್ಥಿಕತೆಗಳು ಈಗ ತಮ್ಮ ನಡುವಿನ ವ್ಯಾಪಾರ ಸಮರಕ್ಕೆ ಮೂರು ತಿಂಗಳ ವಿರಾಮ ನೀಡಿವೆ. ಇನ್ನು 24 ದಿನಗಳ ವಿರಾಮ ಮಾತ್ರ ಉಳಿದಿದ್ದು, ಅದು ಕೊನೆಗೊಂಡ ಬಳಿಕ, ಅಮೆರಿಕ ಗರಿಷ್ಠ ಪ್ರಮಾಣದಲ್ಲಿ ಆಮದು ತೆರಿಗೆ ವಿಧಿಸಲಿದೆ.

ಇದು ಜಾಗತಿಕ ಆರ್ಥಿಕತೆಗೆ ಆಘಾತಕಾರಿಯಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News