ಕೊನೆಯುಸಿರೆಳೆದ ಏಶ್ಯಾದ ಅತ್ಯಂತ ವೃದ್ಧ ಆನೆ ದಾಕ್ಷಾಯಣಿ

Update: 2019-02-06 17:05 GMT

ತಿರುವನಂತಪುರಂ,ಫೆ.6: ಬಂಧನದಲ್ಲಿರುವ ಏಶ್ಯಾದ ಅತ್ಯಂತ ವೃದ್ಧ ಆನೆ ಎಂಬ ಖ್ಯಾತಿಗೆ ಒಳಗಾಗಿದ್ದ ದಾಕ್ಷಾಯಣಿ ಮಂಗಳವಾರ ಕೇರಳದ ತಿರುವನಂತಪುರಂನಲ್ಲಿ ಕೊನೆಯುಸಿರೆಳೆಯಿತು. ಚೆಂಗಲ್ಲೂರು ದಾಕ್ಷಾಯಿಣಿ ಎಂದು ಹೆಸರಿಡಲಾಗಿದ್ದ ಹೆಣ್ಣಾನೆಯನ್ನು ಎಲ್ಲರೂ ಪ್ರೀತಿಯಿಂದ ‘ಗಜ ಮುತ್ತಜ್ಜಿ’ ಎಂದೇ ಸಂಬೋಧಿಸುತ್ತಿದ್ದರು.

ಮಂಗಳವಾರ ಪಪ್ಪನಂಕೋಡ್‌ನ ತನ್ನ ಆಶ್ರಯತಾಣದಲ್ಲಿ ಕುಸಿದುಬಿದ್ದ ಗಜ ಮುತ್ತಜ್ಜಿ ಇಹಲೋಕ ತ್ಯಜಿಸಿತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ತನ್ನ ಕೊನೆಯ ದಿನಗಳಲ್ಲಿ ಮುತ್ತಜ್ಜಿ ಯಾವುದೇ ಅನಾರೋಗ್ಯ, ಗಾಯದ ಸಮಸ್ಯೆ ಅಥವಾ ಇತರ ವಯೋಸಹಜ ರೋಗಗಳಿಂದ ಬಳಲುತ್ತಿರಲಿಲ್ಲ ಎಂದು ಟ್ರಾವಂಕೋರ್ ದೇವಸ್ವಂ ಮಂಡಳಿಯ ಪಶು ಶಸ್ತ್ರಚಿಕಿತ್ಸಕ ಟಿ.ರಾಜೀವ್ ತಿಳಿಸಿದ್ದಾರೆ. ದಾಕ್ಷಾಯಣಿಯ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೆಲವು ತಿಂಗಳುಗಳಿಂದ ಆಕೆಯ ಆಹಾರದಲ್ಲಿ ಅನಾನಸು ಮತ್ತು ಕ್ಯಾರೆಟ್ ಸೇರಿಸಲಾಗಿತ್ತು ಎಂದು ಕಳೆದ ಹತ್ತು ವರ್ಷಗಳಿಂದ ಆನೆಯ ಆರೋಗ್ಯವನ್ನು ಪರಿಶೀಲಿಸುತ್ತಿರುವ ರಾಜೀವ್ ತಿಳಿಸಿದ್ದಾರೆ. ಟ್ರಾವಂಕೋರ್ ಕುಟುಂಬ ಐದು ವರ್ಷದ ಆನೆಯನ್ನು ಕೊನ್ನಿ ಆನೆ ಶಿಬಿರದಿಂದ ತಂದಿತ್ತು. ನಂತರ ಈ ಆನೆಯನ್ನು ಚೆಂಗಲ್ಲೂರು ಮಹಾದೇವ ದೇಗುಲಕ್ಕೆ ನೀಡಲಾಗಿತ್ತು. 2016ರ ಜುಲೈಯಲ್ಲಿ ದೇವಸ್ವಂ ಮಂಡಳಿ ದಾಕ್ಷಾಯಣಿಗೆ ‘ಗಜ ಮುತ್ತಜ್ಜಿ’ ಎಂದು ಬಿರುದು ನೀಡಿತ್ತು. ಈ ಸಂದರ್ಭದ ಸ್ಮರಣಿಕೆಯಾಗಿ ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News