ಐಟಿ ರಿಟರ್ನ್ ಸಲ್ಲಿಸಲು ಪಾನ್ ಜೊತೆ ಆಧಾರ್ ಜೋಡಣೆ ಕಡ್ಡಾಯ: ಸುಪ್ರೀಂ

Update: 2019-02-06 17:14 GMT

ಹೊಸದಿಲ್ಲಿ,ಫೆ.6: ಐಟಿ ರಿಟರ್ನ್‌ ಸಲ್ಲಿಸಲು ಪಾನ್ ಜೊತೆ ಆಧಾರ್ ಜೋಡಣೆ ಕಡ್ಡಾಯ ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ.

ಶ್ರೇಯಾ ಸೇನ್ ಮತ್ತು ಜಯಶ್ರೀ ಸಾತ್ಪುತೆ ಎನ್ನುವವರು ಆಧಾರನ್ನು ಪಾನ್‌ನೊಂದಿಗೆ ಜೋಡಣೆಗೊಳಿಸದೆ 2018-19ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಅವಕಾಶ ನೀಡಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಕೇಂದ್ರವು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಈ ನಿರ್ದೇಶವು ಹೊರಬಿದ್ದಿದೆ.

ವಿಷಯವು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಉಚ್ಚ ನ್ಯಾಯಾಲಯವು ಆದೇಶವನ್ನು ಹೊರಡಿಸಿತ್ತು. ಆ ಬಳಿಕ ಈ ನ್ಯಾಯಾಲಯವು ವಿಷಯವನ್ನು ಇತ್ಯರ್ಥಗೊಳಿಸಿದೆ ಮತ್ತು ಆದಾಯ ತೆರಿಗೆ ಕಾಯ್ದೆಯ ಕಲಂ 139 ಎಎ ಅನ್ನು ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಪಾನ್ ಜೊತೆ ಆಧಾರ್ ಜೋಡಣೆಯು ಕಡ್ಡಾಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಎಸ್.ಅಬ್ದುಲ್ ನಝೀರ್ ಅವರನ್ನೊಳಗೊಂಡ ಪೀಠವು ಹೇಳಿತು.

2018-19ನೇ ಸಾಲಿನ ತೆರಿಗೆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು,ಇಬ್ಬರೂ ಅರ್ಜಿದಾರರು ಉಚ್ಚ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ತಮ್ಮ ಐಟಿಆರ್‌ ಗಳನ್ನು ಸಲ್ಲಿಸಿದ್ದಾರೆ ಮತ್ತು ಅವರ ತೆರಿಗೆ ಮೌಲ್ಯಮಾಪನವು ಪೂರ್ಣಗೊಂಡಿದೆ ಎಂದು ತನಗೆ ಮಾಹಿತಿ ನೀಡಲಾಗಿದೆ. ಆದ್ದರಿಂದ 2019-20ನೇ ಸಾಲಿಗೆ ಈ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಐಟಿಆರ್‌ಗಳನ್ನು ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿತು.

ಕಳೆದ ವರ್ಷದ ಸೆ.26ರಂದು ಆಧಾರ್‌ನ ಸಾಂವಿಧಾನಿಕ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತಾದರೂ, ಬ್ಯಾಂಕ್ ಖಾತೆಗಳು,ಮೊಬೈಲ್ ಫೋನ್ ಸಂಪರ್ಕಗಳು ಮತ್ತು ಶಾಲಾಪ್ರವೇಶ ಇತ್ಯಾದಿಗಳೊಂದಿಗೆ ಅದರ ಕಡ್ಡಾಯ ಜೋಡಣೆಯನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News