ರೊಹಿಂಗ್ಯನ್ನರನ್ನು ಮ್ಯಾನ್ಮಾರ್ ನಲ್ಲಿ ಪಶುಗಳಂತೆ ನೋಡಿಕೊಳ್ಳಲಾಗಿದೆ: ಏಂಜಲಿನಾ ಜೋಲಿ

Update: 2019-02-07 10:47 GMT

ಢಾಕಾ, ಫೆ.7: ಬಾಂಗ್ಲಾದೇಶದಲ್ಲಿರುವ ರೋಹಿಂಗ್ಯ ನಿರಾಶ್ರಿತರ ಶಿಬಿರಗಳಿಗೆ ಹಾಲಿವುಡ್ ನಟಿ ಹಾಗೂ ವಿಶ್ವ ಸಂಸ್ಥೆಯ ನಿರಾಶ್ರಿತರ ಏಜನ್ಸಿಯ ರಾಯಭಾರಿ ಏಂಜಲಿನಾ ಜೋಲಿ ಭೇಟಿ ನೀಡಿದ್ದು, ಈ ಸಂದರ್ಭ ತಾನು ಮಾತನಾಡಿಸಿದ ಹಲವು ಅತ್ಯಾಚಾರ ಸಂತ್ರಸ್ತೆಯರ ಮನಮಿಡಿಯುವ ಕಥೆಗಳನ್ನು ಹೇಳಿಕೊಂಡಿದ್ದಾರೆ. ಅವರನ್ನೆಲ್ಲಾ ಪಶುಗಳಂತೆ ಮ್ಯಾನ್ಮಾರ್ ನಲ್ಲಿ ನೋಡಿಕೊಳ್ಳಲಾಗುತ್ತಿತ್ತು ಎಂದು ವಿವರಿಸಿದ್ದಾರೆ.

ಸಾವಿರಾರು ರೋಹಿಂಗ್ಯ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈಯ್ಯುವಂತೆ ಮಾಡಿದ ಹಿಂಸೆಯನ್ನು ಅಂತ್ಯಗೊಳಿಸಲು ಮ್ಯಾನ್ಮಾರ್ ನೈಜ ಕಾಳಜಿ ತೋರಬೇಕೆಂದು ಜೋಲಿ ಆಗ್ರಹಿಸಿದ್ದಾರೆ.

ಆಗಸ್ಟ್ 2017ರಿಂದ ಸುಮಾರು 7.4 ಲಕ್ಷ ರೋಹಿಂಗ್ಯ ನಿರಾಶ್ರಿತರು ಆಶ್ರಯ ಪಡೆದಿರುವ ಬಾಂಗ್ಲಾದೇಶದ ಕಾಕ್ಸ್ ಬಜಾರ್ ಜಿಲ್ಲೆಗೆ ಭೇಟಿ ನೀಡಿದ ಎರಡನೇ ದಿನ ಜೋಲಿ ಮೇಲಿನಂತೆ ಹೇಳಿದ್ದಾರೆ.

ರೋಹಿಂಗ್ಯ ನಿರಾಶ್ರಿತರಿಗಾಗಿ ಸುಮಾರು ಒಂದು ಬಿಲಿಯನ್ ಡಾಲರ್ ಸಂಗ್ರಹಿಸುವಂತೆ ವಿಶ್ವ ಸಂಸ್ಥೆ ಅಪೀಲು ಮಾಡುವುದಕ್ಕೆ ಮುಂಚಿತವಾಗಿ ಜೋಲಿ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದ್ದಾರೆ.

"ಜೀವನ ಪೂರ್ತಿ ದೌರ್ಜನ್ಯಕ್ಕೆ ಒಳಗಾದ ನಿರಾಶ್ರಿತ ಕುಟುಂಬಗಳು ತಮ್ಮನ್ನು ಪಶುಗಳಂತೆ ಹೇಗೆ ನೋಡಲಾಗುತ್ತಿದೆ ಎಂದು ವಿವರಿಸಿವೆ'' ಎಂದು ಜೋಲಿ ಹೇಳಿದ್ದಾರೆ.

ಎಲ್ಲರಿಗೂ ತಮ್ಮ ಮನೆಗೆ ಹೋಗುವ ಇಚ್ಛೆಯಿದ್ದರೂ ಅಲ್ಲಿ ಎಲ್ಲವೂ ಸುರಕ್ಷಿತವಾಗಿದೆ ಹಾಗೂ ಅವರ ಹಕ್ಕುಗಳನ್ನು ಮಾನ್ಯ ಮಾಡಲಾಗುವುದು ಎಂದು ತಿಳಿದು ಬಂದಾಗ ಮಾತ್ರ ಅವರು ವಾಪಸಾಗಬೇಕು ಎಂದು ಜೋಲಿ ಹೇಳಿದರು.

ಮ್ಯಾನ್ಮಾರ್ ನ ರಾಖೈನ್ ರಾಜ್ಯದಲ್ಲಿನ ಹಿಂಸಾಚಾರ ಕೊನೆಗೊಳ್ಳಬೇಕು ಹಾಗೂ ದೌರ್ಜನ್ಯ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಬೇಕು ಎಂದು ಜೋಲಿ ಆಗ್ರಹಿಸಿದರು.

ಆವರು ಈ ಹಿಂದೆ ರೋಹಿಂಗ್ಯನ್ನರನ್ನು ಮ್ಯಾನ್ಮಾರ್ ನಲ್ಲಿ ಜುಲೈ 2015ರಲ್ಲಿ ಹಾಗೂ ಭಾರತದಲ್ಲಿ 2006ರಲ್ಲಿ ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News