ತಲಾ 3,000 ಗಿಡಗಳನ್ನು ನೆಡಿ: 2ಜಿ ಆರೋಪಿಗಳಿಗೆ ನ್ಯಾಯಾಲಯದ ನಿರ್ದೇಶ

Update: 2019-02-07 15:15 GMT

ಹೊಸದಿಲ್ಲಿ, ಫೆ. 7: 2ಜಿ ಹಗರಣದಲ್ಲಿ ದೋಷಮುಕ್ತಿಗಳಿಸಿರು ವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡಲು ಇನ್ನಷ್ಟು ಸಮಯಾವಕಾಶ ಕೋರಿದ ಇಬ್ಬರು ವ್ಯಕ್ತಿಗಳು ಹಾಗೂ ಮೂರು ಕಂಪೆನಿಗಳಿಗೆ ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ತಲಾ 3000 ಗಿಡಗಳನ್ನು ನೆಡುವಂತೆ ಆದೇಶಿಸಿದೆ.

ನ್ಯಾಯಮೂರ್ತಿ ನಝ್ಮಿ ವಾಝಿರಿ ಅವರು ಸ್ವಾನ್ ಟೆಲಿಫೋನ್ ಪ್ರೈವೇಟ್ ಲಿಮಿಟೆಡ್‌ನ ಪ್ರವರ್ತಕರಾದ ಶಾಹಿದ್ ಬಲ್ವಾ, ಕುಸೆಗಾಂವ್ ಫ್ರುಟ್ಸ್ ಆ್ಯಂಡ್ ವೆಜಿಟೆಬಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ರಾಜೀವ್ ಅಗರ್ವಾಲ್ ಹಾಗೂ ಕಂಪೆನಿಗಾಳದ ಡೈನಾಮಿಕ್ ರಿಯಾಲ್ಟಿ, ಡಿ.ಬಿ. ರಿಯಾಲ್ಟಿ ಲಿಮಿಟೆಡ್ ಹಾಗೂ ನಿಹಾರ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ಗೆ ಪ್ರತಿಕ್ರಿಯೆ ನೀಡಲು ಕೊನೆ ಅವಕಾಶ ನೀಡಿದ್ದಾರೆ. ಜಾರಿ ನಿರ್ದೇಶನಾಲಯದ ಹಣ ವಂಚನೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಟೆಲಿಕಾಂನ ಮಾಜಿ ಸಚಿವ ಎ. ರಾಜಾ, ಡಿಎಂಕೆ ಸಂಸದೆ ಕನ್ನಿಮೋಳಿ ಸಹಿತ ಇತರರೊಂದಿಗೆ ಇಬ್ಬರು ವ್ಯಕ್ತಿಗಳು ಹಾಗೂ ಮೂರು ಕಂಪೆನಿಗಳನ್ನು ದೋಷಮುಕ್ತಗೊಳಿಸಿತ್ತು. ದಕ್ಷಿಣ ದಿಲ್ಲಿಯ ಪ್ರದೇಶದಲ್ಲಿ ಗಿಡಗಳನ್ನು ನೆಡಲು ಫೆಬ್ರವರಿ 15ರಂದು ಸಂಬಂಧಿತ ಅರಣ್ಯಾಧಿಕಾರಿಗಳ ಮುಂದೆ ಹಾಜರಾಗುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 26ರಂದು ನಿಗದಿಗೊಳಿಸಿದೆ. ವಿಶೇಷ ನ್ಯಾಯಾಲಯ 2017 ಡಿಸೆಂಬರ್ 21ರಂದು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಪ್ರಕರಣಗಳಲ್ಲಿ ರಾಜಾ, ಕನ್ನಿಮೋಳಿ ಹಾಗೂ ಇತರರನ್ನು ಖುಲಾಸೆಗೊಳಿಸಿತ್ತು. ಜಾರಿ ನಿರ್ದೇಶನಾಲಯದ ಪ್ರಕರಣಕ್ಕೆ ಸಂಬಂಧಿಸಿ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್, ವಿನೋದ್ ಗೋಯೆಂಕಾ, ಆಸಿಫ್ ಬಲ್ವಾ, ಚಿತ್ರ ನಿರ್ಮಾಣಕಾರ ಕರೀಮ್ ಮೊರಾನಿ, ಪಿ. ಅಮೃಥಮ್ ಹಾಗೂ ಕಲೈಂಞಾರ್ ಟಿ.ವಿ.ಯ ಶರದ್ ಕುಮಾರ್ ಅವರನ್ನು ಖುಲಾಸೆಗೊಳಿಸಲಾಗಿತ್ತು.

ಇದೇ ದಿನ, ಸಿಬಿಐಯ 2ಜಿ ಹಗರಣದಲ್ಲಿ ರಾಜಾ, ಕನ್ನಿಮೋಳ್ ಹಾಗೂ ಟೆಲಿಕಾಂನ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ್ ಬೆಹುರಾ, ರಾಜಾ ಅವರ ಹಿಂದಿನ ಖಾಸಗಿ ಕಾರ್ಯದರ್ಶಿ ಆರ್.ಕೆ. ಛಂಡೋಲಿಯಾ, ಯುನಿಟೆಕ್ ಲಿಮೆಟೆಡ್‌ನ ಎಂ.ಡಿ. ಸಂಜಯ್ ಚಂದ್ರ ಹಾಗೂ ರಿಲಾಯನ್ಸ್‌ನ ಅನಿಲ್ ಅಂಬಾನಿ ಗುಂಪಿನ ಮೂವರು ಉನ್ನತ ಕಾರ್ಯನಿರ್ವಹಣಾಧಿಕಾರಿಗಳಾದ ಗೌತಮ್ ದೋಶಿ, ಸುರೇಂದ್ರ ಪಿಪಾರಾ ಹಾಗೂ ಹರಿ ನಾಯರ್ ಅನ್ನು ವಿಚಾರಣಾ ನ್ಯಾಯಾಲಯ ಬಿಡುಗಡೆಗೊಳಿಸಿತ್ತು. 2 ಜಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿರುವದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಕಳೆದ ವರ್ಷ ಮಾರ್ಚ್ 19ರಂದು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಒಂದು ದಿನದ ಬಳಿಕ ಆರೋಪಿಗಳನ್ನು ಖುಲಾಸೆಗೊಳಿಸಿರುವುದುನ್ನು ಪ್ರಶ್ನಿಸಿ ಸಿಬಿಐ ಕೂಡ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News