ಗಡ್ಕರಿ ಕಾರ್ಯವೈಖರಿಗೆ ಸೋನಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದು ಹೀಗೆ…

Update: 2019-02-07 15:37 GMT

ಹೊಸದಿಲ್ಲಿ,ಫೆ.7: ದೇಶದ ಮೂಲಸೌಕರ್ಯಗಳನ್ನು ಉತ್ತಮಗೊಳಿಸುವಲ್ಲಿ ಸಾರಿಗೆ ಸಚಿವರಾಗಿ ನಿತಿನ್ ಗಡ್ಕರಿಯವರ ಕಾರ್ಯವೈಖರಿಯನ್ನು ಗುರುವಾರ ಲೋಕಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಪ್ರಶಂಸಿಸಿತು.

ಪ್ರಶ್ನೆವೇಳೆಯಲ್ಲಿ ಸದನವು ಗಡ್ಕರಿಯವರ ಸಚಿವಾಲಯಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಗಳನ್ನು ಕೈಗೆತ್ತಿಕೊಂಡಿತ್ತು. ದೇಶದಲ್ಲಿ ರಸ್ತೆ ಜಾಲವನ್ನು ವಿಸ್ತರಿಸಲು ನಡೆಯುತ್ತಿರುವ ಕಾಮಗಾರಿಗಳು ಮತ್ತು ಕೈಗೆತ್ತಿಕೊಳ್ಳಲಾಗುತ್ತಿರುವ ಕಾಮಗಾರಿಗಳ ಬಗ್ಗೆ ವಿವರಣೆಯನ್ನು ನೀಡಿದ ಗಡ್ಕರಿ,‘ತಮ್ಮ ಕ್ಷೇತ್ರಗಳಲ್ಲಿ ನನ್ನ ಸಚಿವಾಲಯವು ಮಾಡಿರುವ ಕೆಲಸಗಳಿಗಾಗಿ ಎಲ್ಲ ಸಂಸದರು ಪಕ್ಷಭೇದ ಮರೆತು ನನ್ನನ್ನು ಹೊಗಳುತ್ತಿದ್ದಾರೆ ಎನ್ನುವುದನ್ನು ನಾನು ಇಲ್ಲಿ ಹೇಳಲೇಬೇಕು’ ಎಂದರು. ಆಡಳಿತಾರೂಢ ಬಿಜೆಪಿ ಸದಸ್ಯರು ಮೇಜುಗಳನ್ನು ಗುದ್ದಿ ವ್ಯಕ್ತಪಡಿಸುತ್ತಿದ್ದ ಹರ್ಷದ ನಡುವೆಯೇ ಗಡ್ಕರಿಯವರು ತನ್ನ ಉತ್ತರವನ್ನು ಪೂರ್ಣಗೊಳಿಸಿದಾಗ,ಗಡ್ಕರಿಯವರ ‘ಅದ್ಭುತ’ ಕಾರ್ಯವನ್ನು ಸದನವು ಮೆಚ್ಚಿಕೊಳ್ಳಬೇಕು ಎಂದು ಮಧ್ಯಪ್ರದೇಶದ ಬಿಜೆಪಿ ಸಂಸದ ಗಣೇಶ ಸಿಂಗ್ ಅವರು ಸ್ಪೀಕರ್ ಸುಮಿತ್ರಾ ಮಹಾಜನ ಅವರಿಗೆ ಹೇಳಿದರು.

ಗಡ್ಕರಿಯವರನ್ನು ತಾಳ್ಮೆಯಿಂದ ಆಲಿಸುತ್ತಿದ್ದ ಮತ್ತು ಆಗಾಗ್ಗೆ ಅವರ ಉತ್ತರಕ್ಕೆ ಸಮ್ಮತಿ ಸೂಚಿಸುತ್ತಿದ್ದ ಸೋನಿಯಾ ಮುಗುಳ್ನಕ್ಕು ಪ್ರಶಂಸೆಯ ಕುರುಹಾಗಿ ಮೇಜನ್ನು ಗುದ್ದತೊಡಗಿದಾಗ ಲೋಕಸಭೆಯಲ್ಲಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಸದಸ್ಯರೂ ಮೇಜುಗಳನ್ನು ಗುದ್ದಿ ತಮ್ಮ ಪ್ರಶಂಸೆಗಳನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News